ಸಾರಾಂಶ
ಮದ್ದೂರು : ಶಾಲಾ ಶುಲ್ಕ ಪಾವತಿಸಲಿಲ್ಲ ಎಂಬ ಕಾರಣಕ್ಕೆ ತಾಲೂಕಿನ ಹುಲಿಗೆರೆಪುರ ಗ್ರಾಮದ ಅನಿಕೇತನ ಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಎಚ್.ಎಲ್.ಮಿಲನಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಭಾನುವಾರ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಆಡಳಿತ ಮುಖ್ಯಸ್ಥರ ವಿಚಾರಣೆ ನಡೆಸಿದರು.
ಮಂಡ್ಯ ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವರಾಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಸೇರಿದಂತೆ ಇಲಾಖೆ ಅಧಿಕಾರಿಗಳು ವಿದ್ಯಾ ಸಂಸ್ಥೆ ಅಧ್ಯಕ್ಷ ಹುಚ್ಚೇಗೌಡ, ಕಾರ್ಯದರ್ಶಿ ರಮೇಶ್, ಮುಖ್ಯ ಶಿಕ್ಷಕರಾದ ಶೈಲಜ, ರೇಖಾ ಹಾಗೂ ತರಗತಿಯ ಶಿಕ್ಷಕರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದುಕೊಂಡರು.
ವಿದ್ಯಾರ್ಥಿನಿ ಮಿಲನಾ ಆರ್‌ಟಿಐನಿಂದ ಆಯ್ಕೆ ಆಗಿದ್ದ ಕಾರಣ ಆಕೆ ಪೋಷಕರಿಂದ ಸಮವಸ್ತ್ರ ಮತ್ತು ಶೂಗಳಿಗೆ ಮಾತ್ರ ಶುಲ್ಕ ವಸೂಲಿ ಪಾವತಿಸುವಂತೆ ಒತ್ತಾಯ ಮಾಡಲಾಗುತ್ತಿತ್ತು ಎಂದು ಆಡಳಿತ ಮಂಡಳಿ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಶನಿವಾರ ವಿದ್ಯಾರ್ಥಿನಿ ಮಿಲನಾ ಚಿಕ್ಕಪ್ಪನ ಮಗ ಶಾಲೆಗೆ ಬಂದಿದ್ದರು. ಈ ವೇಳೆ ಆಕೆ ವಿದ್ಯಾಭ್ಯಾಸದ ಬಗ್ಗೆ ಶಿಕ್ಷಕರಲ್ಲಿ ವಿಚಾರಣೆ ನಡೆಸಿದರು. ಕಲಿಕೆಯಲ್ಲಿ ಆಕೆ ಕೆಲವೊಂದು ವಿಚಾರ ಬಿಟ್ಟರೆ ಉಳಿದಂತೆ ಉತ್ತಮ ರೀತಿಯಲ್ಲಿ ಭಾಗವಹಿಸುತ್ತಿದ್ದಳು ಎಂದು ಶಿಕ್ಷಕರು ತಿಳಿಸಿದ್ದಾರೆ ಎಂದರು.
ವಿದ್ಯಾರ್ಥಿನಿ ಎಚ್.ಎಲ್.ಮಿಲನಾ ಸಾವಿನಲ್ಲಿ ಅನಿಕೇತನ ಶಾಲೆಯ ಯಾವುದೇ ಪಾತ್ರವಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಶಿಕ್ಷಣಾಧಿಕಾರಿ ಧನಂಜಯ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ನಮ್ಮ ಪುತ್ರಿ ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ: ತಂದೆ ಲಕ್ಷ್ಮಿ ಪ್ರಸಾದ್
ಮದ್ದೂರು: ತಮ್ಮ ಪುತ್ರಿ ಮಿಲನಾ ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಲಕ್ಷ್ಮಿಪ್ರಸಾದ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಮಗಳು ಮಿಲನಾ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಈ ಕಾರಣಕ್ಕಾಗಿ ಆತ್ಮಹತ್ಯೆಗೆ ಮಾಡಿಕೊಂಡಿರಬಹುದೆಂದು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿನಿ ಮಿಲನ ಶವವನ್ನು ಶನಿವಾರ ಸಂಜೆಯಿಂದ ಮದ್ದೂರು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿತ್ತು. ವೈದ್ಯರು ಶವ ಪರೀಕ್ಷೆ ನಡೆಸುವ ವೇಳೆ ಆಕೆ ಕುತ್ತಿಗೆಯ ಮೇಲೆ ನೇಣು ಹಾಕಿಕೊಂಡ ಯಾವುದೇ ಗುರುತಿಲ್ಲದ ಕಾರಣ ಸಂಶಯಗೊಂಡು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆಂಬ್ಯುಲೆನ್ಸ್ ವಾಹನದಲ್ಲಿ ಶವಸಾಗಿಸಿದ ನಂತರ ಅಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ನಡೆಸಿದ ಬಳಿಕ ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.
ನಂತರ ಪೋಷಕರು ಮಿಲನಾಳ ಶವವನ್ನು ಸ್ವಗ್ರಾಮ ಹುಲಿಗೆರೆ ಪುರಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಿದರು.