ಸಾರಾಂಶ
ಬೆಂಗಳೂರು : ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಳಿಕ ತಾನೂ ಸಹ ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊತ್ತನೂರು ಮಾರಮ್ಮ ದೇವಸ್ಥಾನ ರಸ್ತೆ ನಿವಾಸಿ ಪ್ರಿಯಾಂಕಾ (24) ಮತ್ತು ಆತನ ಪತಿ ಪ್ರಭು ಜಂಗ್ಲಿ (30) ಬೆಂಕಿಯಿಂದ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆ ಸುಟ್ಟುಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನ.27ರಂದು ಈ ಘಟನೆ ನಡೆದಿದೆ. ಪ್ರಿಯಾಂಕಾ ನೀಡಿದ ದೂರಿನ ಮೇರೆಗೆ ಪತಿ ಪ್ರಭು ಜಂಗ್ಲಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ: ಬೆಳಗಾವಿ ಮೂಲದ ಪ್ರಭು ಜಂಗ್ಲಿ ಮತ್ತು ಬೆಂಗಳೂರು ಮೂಲದ ಪ್ರಿಯಾಂಕಾ ಪರಸ್ಪರ ಪ್ರೀತಿಸಿ 2023ರ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಆರಂಭದಲ್ಲಿ ದಂಪತಿ ಅನ್ಯೋನವಾಗಿದ್ದರು. ಬಳಿಕ ಪತ್ನಿ ಶೀಲದ ಬಗ್ಗೆ ಅನುಮಾನಗೊಂಡು ಪ್ರಭು ಜಂಗ್ಲಿ ಆಗಾಗ ಮನೆಯಲ್ಲಿ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದ. ಕಳೆದ ಒಂದೂವರೆ ತಿಂಗಳ ಹಿಂದೆ ಬೆಳಗಾವಿಯಿಂದ ನಗರಕ್ಕೆ ಬಂದು ದಂಪತಿ ಕೊತ್ತನೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೂ ಪ್ರಭು ಪ್ರತಿ ದಿನ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ.
ನ.27ರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಪ್ರಭು, ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದ ಪತ್ನಿ ಪ್ರಿಯಾಂಕಾ ಜತೆಗೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಬಳಿಕ ಬಾಟಲಿಯಿಂದ ತಂದಿದ್ದ ಪೆಟ್ರೋಲ್ ಅನ್ನು ಪತ್ನಿ ಮೇಲೆ ಸುರಿದು ಬಳಿಕ ತನ್ನ ಮೈ ಮೇಲೂ ಸುರಿದುಕೊಂಡು ಪತ್ನಿಗೆ ಬೆಂಕಿ ಹಚ್ಚಿ ಬಳಿಕ ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿ ಬೆಂಕಿ ಉರಿ ತಾಳಲಾರದೆ ಇಬ್ಬರೂ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ನೆರೆಹೊರೆಯ ನಿವಾಸಿಗಳು ಬೆಂಕಿ ನಂದಿಸಿದ್ದು, ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.