ಸಾರಾಂಶ
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಗರ ವ್ಯಾಪ್ತಿ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಪೊಲೀಸರು ಕಲ್ಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಗರ ವ್ಯಾಪ್ತಿ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಪೊಲೀಸರು ಕಲ್ಪಿಸಿದ್ದಾರೆ.ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಬ್ಬದ ಭದ್ರತೆ ಕುರಿತು ಹಿರಿಯ ಅಧಿಕಾರಿಗಳ ಜತೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಭೆ ನಡೆಸಿದರು. ಈ ವೇಳೆ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿ ಶಾಂತಿ ಭಂಗ ಕೃತ್ಯಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಸಾರ್ವಜನಿಕವಾಗಿ ಗಣೇಶೋತ್ಸವ ಆಯೋಜಿಸುವ ಸಂಘಟಕರ ಬಗ್ಗೆ ಮಾಹಿತಿ ಪಡೆಯಬೇಕು. ಎಲ್ಲೆಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ ಎಂಬ ವಿವರ ಪಡೆದು ಆ ಪ್ರದೇಶಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಈಗಾಗಲೇ ನ್ಯಾಯಾಲಯ ಡಿಜೆಗೆ ಅನುಮತಿ ನೀಡಿಲ್ಲ. ಒಂದು ವೇಳೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಡಿಜೆ ಬಳಸಿದರೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿರುವುದಾಗಿ ತಿಳಿದು ಬಂದಿದೆ.ಗಣೇಶೋತ್ಸವ ಸಮಿತಿಗಳು ಸರ್ಕಾರ ನೀಡಿರುವ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾರ್ಯಕ್ರಮದ ವೇಳೆ ಅಶಾಂತಿಗೆ ಆಸ್ಪದವಾದರೆ ಸಂಬಂಧಪಟ್ಟ ಆಯೋಜಕರೇ ಹೊಣೆಗಾರರಾಗುತ್ತಾರೆ. ಸೂಕ್ಷ್ಮ ಪ್ರದೇಶಗಳ ಕಡೆ ಗಸ್ತು ತಿರುಗಾಟ ಹೆಚ್ಚಿಸಬೇಕು. ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಬಗ್ಗೆ ಸಹ ಕಾಳಜಿ ವಹಿಸುವಂತೆ ಆಯುಕ್ತರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಜಂಟಿ ಆಯುಕ್ತರಾದ ಬಿ. ರಮೇಶ್ ಹಾಗೂ ವಂಶಿಕೃಷ್ಣ ಸೇರಿದಂತೆ ಎಲ್ಲ ಡಿಸಿಪಿಗಳು ಭಾಗವಹಿಸಿದ್ದರು.