ಸಾರಾಂಶ
ಟಾಟಾ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ದಿಲೀಪ್ ಚಾಲನೆ ಮಾಡುತ್ತಿದ್ದ ಟೆಂಪೋ ದ್ರಾಕ್ಷಿ ತುಂಬಿದ ಮತ್ತೊಂದು ಬೊಲೆರೋ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳು ರಸ್ತೆಯಲ್ಲಿ ಉರುಳಿ ಬಿದ್ದು ಸಾವು ನೋವು ಉಂಟಾಗಿದೆ.
ಮದ್ದೂರು : ಮೂರು ಗೂಡ್ಸ್ ಟೆಂಪೋಗಳ ನಡುವೆ ಜರುಗಿದ ಭೀಕರ ಸರಣಿ ಅಪಘಾತದಲ್ಲಿ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ತಾಲೂಕಿನ ದುಂಡನಹಳ್ಳಿ ಸಮೀಪದ ಕಂಪ್ಲಾಪುರ ಗೇಟ್ ಬಳಿ ಸೋಮವಾರ ಮುಂಜಾನೆ ಜರುಗಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಳೂರು ಪಟ್ಟಣದ ಶಿವರಾಜು ಪುತ್ರ ದಿಲೀಪ್ (31) ಮೃತಪಟ್ಟ ಟೆಂಪೋ ಚಾಲಕ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಿಲೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಿಲೀಪ್ ಜೊತೆ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ತಾಲೂಕಿ ಕೊಪ್ಪ ಹೋಬಳಿ ಆನೆದೊಡ್ಡಿ ಗ್ರಾಮದ ವೆಂಕಟೇಶ (40), ನರಸಿಂಹ (35), ಚೆಲುವಯ್ಯ (40) ಹಾಗೂ ಮತ್ತೊಂದು ಟೆಂಪೋದಲ್ಲಿದ್ದ ಮಹಾರಾಷ್ಟ್ರದ ಸಂಗ್ರಾಮ್ ಕಾರೂಠ ಹಾಗೂ ಸೈಯದ್ ಮುಬಾರಕ್ ಗಾಯಗೊಂಡಿದ್ದಾರೆ. ಎಲ್ಲರಿಗೂ ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಟೆಂಪೋ ಚಾಲಕ ಮೃತ ದಿಲೀಪ್ ತೆಂಗಿನ ತೋಟಗಳಲ್ಲಿ ಎಳನೀರು ಕುಯ್ಯುವ ಕೆಲಸ ಮಾಡುತ್ತಿದ್ದರು. ಮದ್ದೂರು ಎಪಿಎಂಸಿಗೆ ಮಾರುಕಟ್ಟೆಗೆ ಎಳನೀರು ಸಾಗಾಣಿಕೆ ಮಾಡಲು ಕುಣಿಗಲ್‌ಗೆ ಮೂವರು ಕೂಲಿ ಕಾರ್ಮಿಕರ ಜೊತೆ ತಮ್ಮ ಬೊಲೆರೋ ಟೆಂಪೋದಲ್ಲಿ ತೆರಳುತ್ತಿದ್ದರು.
ಮದ್ದೂರು -ತುಮಕೂರು ರಾಜ್ಯ ಹೆದ್ದಾರಿಯ ದುಂಡನಹಳ್ಳಿಯ ಕಂಪಲಾಪುರ ಗೇಟ್ ಬಳಿ ಮುಂಜಾನೆ 5:30 ಸುಮಾರಿಗೆ ಎದುರಿನಿಂದ ಬರುತ್ತಿದ್ದ ಟಾಟಾ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ದಿಲೀಪ್ ಚಾಲನೆ ಮಾಡುತ್ತಿದ್ದ ಟೆಂಪೋ ದ್ರಾಕ್ಷಿ ತುಂಬಿದ ಮತ್ತೊಂದು ಬೊಲೆರೋ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳು ರಸ್ತೆಯಲ್ಲಿ ಉರುಳಿ ಬಿದ್ದು ಸಾವು ನೋವು ಉಂಟಾಗಿದೆ. ಅಪಘಾತದಿಂದಾಗಿ ಮದ್ದೂರು ಮತ್ತು ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕೆಸ್ತೂರು ಠಾಣೆ ಪೊಲೀಸರು ಜೆಸಿಪಿ ಸಹಾಯದಿಂದ ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂಬಂಧ ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.