ಸಾರಾಂಶ
ಮಳವಳ್ಳಿ : ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಆಯುಧದಿಂದ ಹಲ್ಲೆ ಮಾಡಿದ ಆರೋಪಿ ಕಾಲಿಗೆ ಗುಂಡಿನ ದಾಳಿ ನಡೆಸಿರುವ ಘಟನೆ ತಾಲೂಕಿನ ಚಿಕ್ಕಮುಲಗೂಡು ಗ್ರಾಮದ ಬಳಿ ನಡೆದಿದೆ.
ತಾಲೂಕು ಹಲಗೂರು ಸಮೀಪದ ಬಾಳೆ ಹೊನ್ನಿಗ ಗ್ರಾಮದ ಮುತ್ತುರಾಜು ಅಲಿಯಾಸ್ ಡಕ್ಕ ಎಂಬಾತನ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಲಗೂರು ಸಮೀಪದ ದೇವಿರಹಳ್ಳಿ ಗೇಟ್ ಬಳಿ ಕಳೆದ ಜುಲೈನಲ್ಲಿ ಕಾಂತರಾಜು ಎಂಬಾತನ ಕೊಲೆ ನಡೆದಿತ್ತು. ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮುತ್ತುರಾಜು ಸೂಚನೆ ಮೇರೆಗೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣದ ಬೆನ್ನತ್ತಿದ ಪೊಲೀಸರು ಮುತ್ತುರಾಜ್ ಅಲಿಯಾಸ್ ಡಕ್ಕನ ಬಂಧನಕ್ಕೆ ತಂಡ ರಚಿಸಿ ಕಾರ್ಯಾಚರಣೆ ರೂಪಿಸಿದ್ದರು. ಅಲ್ಲದೇ, ಮುತ್ತುರಾಜ್ ಹಲಗೂರು, ಕಿರುಗಾವಲು, ಹಾರೋಹಳ್ಳಿ ಮತ್ತು ಮಂಡ್ಯ ಪೂರ್ವ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ರಾಬರಿ ಪ್ರಕರಣ ಸೇರಿದಂತೆ 11ಕ್ಕೂ ಹೆಚ್ಚು ರೌಡಿ ಚಟುವಟಿಕೆಗಳಲ್ಲಿ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಈತ ಹಲವು ದಿನಗಳಿಂದ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಹಲವು ಹುಡುಗರ ಗುಂಪು ಕಟ್ಟಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಈತ 2019ರಿಂದ ರೌಡಿ ಚಟುವಟಿಕೆಯಲ್ಲಿದ್ದು ಇಸ್ಪೀಟ್ , ಜೂಜಾಟ ದಂಧೆಗೂ ಇಳಿದಿದ್ದನು.
ಸೋಮವಾರ ಬೆಳಗ್ಗೆ ಆರೋಪಿ ಮುತ್ತುರಾಜ್ ಮಂಡ್ಯದಿಂದ ಮಳವಳ್ಳಿ ಕಡೆಗೆ ಬರುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಚಿಕ್ಕಮುಲಗೂಡು ಮತ್ತು ಹನಿಯಂಬಾಡಿ ನಡು ಮಾರ್ಗದಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಆರೋಪಿಯನ್ನು ಅಡ್ಡಗಟ್ಟಿದ್ದಾರೆ.
ತಕ್ಷಣ ಚಲಾಕಿ ಬುದ್ಧಿ ತೋರಿದ ಆರೋಪಿ ಬೈಕ್‌ನ್ನು ಮುಖ್ಯ ರಸ್ತೆಯಿಂದ ಜಮೀನುಗಳಿಗೆ ತೆರಳುವ ಕಚ್ಚಾ ರಸ್ತೆಗೆ ತಿರುಗಿಸಿದ್ದಾನೆ. ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಸುತ್ತುವರಿದಾಗ ಈ ವೇಳೆ ಪೊಲೀಸ್ ಪೇದೆ ಸಿದ್ದರಾಜು ಅವರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ತಪ್ಪಿಸಿಕೊಂಡ ಪೊಲೀಸ್ ಪೇದೆಗೆ ಗಾಯವಾಗಿದೆ.
ಮತ್ತೆ ಇತರ ಪೊಲೀಸರ ಮೇಲೂ ಹಲ್ಲೆಗೆ ಮುಂದಾದಾಗ ತಮ್ಮ ಆತ್ಮರಕ್ಷಣೆಗಾಗಿ ಮೊದಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಪರಾರಿಯಾಗಲು ಯತ್ನಿಸಿದಾಗ ಸಿಪಿಐ ಬಿ.ಎಸ್.ಶ್ರೀಧರ್ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರೋಪಿ ಬಲಗಾಲಿನ ಮಂಡಿಗೆ ಗುಂಡು ಒಳಹೊಕ್ಕಿದೆ.
ಆರೋಪಿ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಗಾಯಗೊಂಡ ಸಿದ್ದರಾಜು ಅವರ ಬಲಗೈಗೆ ಗಾಯಗಳಾಗಿದ್ದು, ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ಸಿಬ್ಬಂದಿ ರಕ್ಷಣೆಗಾಗಿ ಫೈರಿಂಗ್: ಎಸ್ಪಿ
ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಮಾಹಿತಿ ನೀಡಿ, ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮುತ್ತುರಾಜು ಆಲಿಯಾಸ್ ಡಕ್ಕನನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಹಿಡಿಯಲು ಮುಂದಾದ ವೇಳೆ ಪೇದೆ ಮೇಲೆ ಆರೋಪಿ ಡ್ರ್ಯಾಗನ್‌ನಿಂದ ಹಲ್ಲೆ ಮಾಡಿದ್ದಾನೆ. ಹೀಗಾಗಿ ಸಿಪಿಐ ಶ್ರೀಧರ್ ಪೊಲೀಸ್ ಸಿಬ್ಬಂದಿ ರಕ್ಷಣೆಗಾಗಿ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಆರೋಪಿ ಮತ್ತು ಆತನ ಹುಡುಗರು ಇನ್ನಷ್ಟು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಆರೋಪಿ ವಿಚಾರಣೆ ನಂತರ ಆತನ ಹುಡುಗರ ಬಂಧನ ಮಾಡಲಾಗುವುದು ಎಂದು ಹೇಳಿದ್ದಾರೆ.