ಸಾರಾಂಶ
ಮಂಡ್ಯ : ವಾಟರ್ ಮೀಟರ್ ಪರಿಶೀಲನೆಗಾಗಿ ಬಂದಿರುವುದಾಗಿ ಹೇಳಿ ಮನೆಯವರನ್ನು ವಂಚಿಸಿ ನಗದು ಹಣ ಮತ್ತು ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ರವಿ (29) ಬಂಧಿತ ಆರೋಪಿ. ಕಳೆದ ಜೂ.26ರಂದು ಸ್ವರ್ಣಸಂದ್ರ ಬಡಾವಣೆಯ ಪುಷ್ಪವತಿ ಅವರ ಮನೆಗೆ ಧಾವಿಸಿದ ರವಿ ಸೇರಿ ಮೂವರು ಆರೋಪಿಗಳು, ವಾಟರ್ ಮೀಟರ್ ಪರಿಶೀಲನೆ ಮಾಡುತ್ತೇವೆ ಎಂದು ಮನೆ ಮೇಲೆ ತೆರಳಿ ಟ್ಯಾಂಕ್ ಪರಿಶೀಲನೆಗೆ ತೊಡಗಿದ್ದಾರೆ. ಮತ್ತೋರ್ವ ಆರೋಪಿ ಮನೆಯೊಳಗೆ ತೆರಳಿ ಕೊಠಡಿಯಲ್ಲಿದ್ದ 50 ಸಾವಿರ ನಗದು, 180 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಪೂರ್ವ ಠಾಣೆ ಪೊಲೀಸರು ತನಿಖೆ ನಡೆಸಿ ಬೆಂಗಳೂರಿನ ಅತ್ತಿಬೆಲೆಯಲ್ಲಿ ಆರೋಪಿ ರವಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಸುಮಾರು 10 ಲಕ್ಷ ರು. ವೌಲ್ಯದ ಚಿನ್ನಾಭರಣ ಹಾಗೂ ಒಂದು ಯಮಹ ಆರ್ 15 ಮೋಟಾರ್ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ರಾಜಸ್ಥಾನ, ಜೋದ್‌ಪುರ, ಮುಂಬೈಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಪೂರ್ವ ಠಾಣೆ ಪಿಎಸ್‌ಐ ಶೇಷಾದ್ರಿಕುಮಾರ್, ಸಿಬ್ಬಂದಿ ಲಿಂಗರಾಜು, ಮಹೇಶ್, ಅನಿಲ್‌ಕುಮಾರ್, ಉಮರ್ ಅಹಮ್ಮದ್ ಫಾರೂಕಿ, ಮಂಜುನಾಥ, ಶ್ರೀನಿವಾಸ ಇತರರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. ಆರೋಪಿ ಪತ್ತೆ ಮಾಡಿದ ಪೊಲೀಸರ ತಂಡದ ಕಾರ್ಯವನ್ನು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದ್ದಾರೆ.