ಮನೆಗಳ್ಳನ ಸೆರೆ; ₹7.79 ಲಕ್ಷದ 132 ಗ್ರಾಂ ಚಿನ್ನಾಭರಣ ವಶ

| Published : Feb 28 2024, 02:32 AM IST

ಸಾರಾಂಶ

ನಗರದಲ್ಲಿ ಮನೆಗಳ್ಳತನ ಕೃತ್ಯದಲ್ಲಿ ತೊಡಗಿದ್ದ ವೃತ್ತಿಪರ ಕಳ್ಳನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಮನೆಗಳ್ಳತನ ಕೃತ್ಯದಲ್ಲಿ ತೊಡಗಿದ್ದ ವೃತ್ತಿಪರ ಕಳ್ಳನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುರಪ್ಪನಪಾಳ್ಯದ ಮುನಿಯಪ್ಪನ್‌ ಅಲಿಯಾಸ್‌ ಮುನಿಯಾ ಬಂಧಿತನಾಗಿದ್ದು, ಆರೋಪಿಯಿಂದ 7.79 ಲಕ್ಷ ರು. ಮೌಲ್ಯದ 132 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಸದಾನಂದನಗರದಲ್ಲಿ ರಾತ್ರಿ ವೇಳೆ ಮನೆಯೊಂದರ ಬಾಗಿಲು ಮುರಿದು ಚಿನ್ನಾಭರಣವನ್ನು ದುಷ್ಕರ್ಮಿ ದೋಚಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಮುನಿಯಪ್ಪನ್‌ನನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುನಿಯಪ್ಪನ್ ವಿರುದ್ಧ ಬೈಯಪ್ಪನಹಳ್ಳಿ, ಕೆ.ಆರ್‌.ಪುರ, ಮೈಕೋ ಲೇಔಟ್‌, ಜೆ.ಪಿ.ನಗರ, ಕೋಣನಕುಂಟೆ, ಹೆಣ್ಣೂರು, ಬಾಣಸವಾಡಿ ಹಾಗೂ ಎಚ್‌ಎಎಲ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಮೊದಲು ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಆರೋಪಿ, ನಿರಾಯಾಸವಾಗಿ ಹಣ ಸಂಪಾದನೆಗೆ ಮನೆಗಳ್ಳತನಕ್ಕಿಳಿದ್ದ. ಹಗಲು ಹೊತ್ತಿನಲ್ಲಿ ನಗರ ಸಂಚಾರ ನಡೆಸಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಆ ಮನೆಗಳಿಗೆ ರಾತ್ರಿ ವೇಳೆ ಆತ ಕನ್ನ ಹಾಕುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

- - - -

ಮೂವರು ಸರಗಳ್ಳರ ಸೆರೆ; ₹4.2 ಲಕ್ಷ ಮೌಲ್ಯದ ಚಿನ್ನಾಭರಣ, 2 ಬೈಕ್‌ ಜಪ್ತಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಸರಗಳ್ಳತನ ಕೃತ್ಯ ಎಸಗುತ್ತಿದ್ದ ಮೂವರನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾರತ್ತಹಳ್ಳಿಯ ಮಹಮ್ಮದ್ ನೌಷಾದ್‌ ಅಲಿಯಾಸ್ ಬ್ರೂಸ್ಲಿ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಭಾಷ್ ನಗರದ ವಿ.ಅವಿನಾಶ್‌ ಹಾಗೂ ರೋಷನ್ ಡಿಸೋಜಾ ಅಲಿಯಾಸ್ ರೋಶು ಬಂಧಿತರಾಗಿದ್ದು, ಆರೋಪಿಗಳಿಂದ 4.2 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ ಎರಡು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ಫೆ.8 ರಂದು ಇಂದಿರಾನಗರದ 6ನೇ ಮುಖ್ಯರಸ್ತೆಯಲ್ಲಿ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರಿಂದ ಕಿಡಿಗೇಡಿಗಳು ಸರ ಅಪಹರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳಿಂದ ಇಂದಿರಾನಗರ, ಮಾರತ್ತಹಳ್ಳಿ, ಜೆ.ಬಿ.ನಗರ ಹಾಗೂ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಸರಗಳ್ಳತನ ಹಾಗೂ ಮೂರು ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಣ್ಣಪುಟ್ಟ ಕೆಲಸಗಾರರು:

ಮಾರತ್ತಹಳ್ಳಿ ಬಳಿ ಟೀ ಅಂಗಡಿಯಲ್ಲಿ ಮಹಮ್ಮದ್ ಕೆಲಸಗಾರನಾಗಿದ್ದರೆ, ಅವಿನಾಶ್ ಆಟೋ ಚಾಲಕನಾಗಿದ್ದ. ಅದೇ ರೀತಿ ಕೊಳಾಯಿ ರಿಪೇರಿ ಮಾಡಿಕೊಂಡು ರೋಷನ್‌ ಜೀವನ ಸಾಗಿಸುತ್ತಿದ್ದ. ಮೋಜಿನ ಜೀವನಕ್ಕಾಗಿ ಸರಗಳ್ಳತನಕ್ಕಿಳಿದ ಈ ಮೂವರು ಈಗ ಜೈಲು ಸೇರಿದ್ದಾರೆ.