ಸಾರಾಂಶ
ಬೆಂಗಳೂರಿನಲ್ಲಿ ಪರಿಚಿತ ಮಸಾಜ್ ಸೆಂಟರ್‌ನ ಮಾಲಕಿಯನ್ನು ಕಟ್ಟಿಹಾಕಿ ಚಿನ್ನ ದೋಚಿದ್ದ ದಂಪತಿ ಸೇರಿ ಐವರ ಬಂಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಚಿಕಿತ್ಸೆ ನೆಪದಲ್ಲಿ ತೆರಳಿ ಆಯುರ್ವೇದಿಕ್ ಮಸಾಜ್ ಕೇಂದ್ರದ ಮಾಲಕಿಯ ಕೈ-ಕಾಲು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ್ದ ದಂಪತಿ ಸೇರಿದಂತೆ ಐವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆಂದ್ರಹಳ್ಳಿಯ ಎಸ್.ಗುರು, ಆತನ ಪತ್ನಿ ರೇಣುಕಾ, ಪ್ರಭಾವತಿ, ರುದ್ರೇಶ್ ಹಾಗೂ ಸಂದೀಪ್ ಬಂಧಿತರಾಗಿದ್ದು, ಆರೋಪಿಗಳಿಂದ 46 ಗ್ರಾಂ ಚಿನ್ನದ ಸರ ಹಾಗೂ ಎರಡು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಜ.13ರಂದು ಸಂಜೆ 6 ಗಂಟೆಯಲ್ಲಿ ತಿಂಡ್ಲು ಸರ್ಕಲ್ ಸಮೀಪದ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್ ನುಗ್ಗಿ ಮಾಲಕಿ ಅನುಶ್ರೀ ಅವರಿಗೆ ಮಂಪರು ಬರಿಸುವ ಮದ್ದು ಸಿಂಪಡಿಸಿ ಬಳಿಕ ಕೈ-ಕಾಲು ಕಟ್ಟಿ ದರೋಡೆ ಮಾಡಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗೆ ಸಾಲದ ಸುಳಿಗೆ ಗುರು ದಂಪತಿ ಸಿಲುಕಿದ್ದರು. ಈ ಆರ್ಥಿಕ ಸಮಸ್ಯೆಯಿಂದ ಹೊರಬರಲು ಅಡ್ಡದಾರಿ ತಿಳಿದಿದ್ದ ಸತಿ-ಪತಿ, ತಮ್ಮ ಪರಿಚಯವಿದ್ದ ಅನುಶ್ರೀ ಅವರಿಂದ ಹಣ ದರೋಡೆಗೆ ಸಂಚು ರೂಪಿಸಿದ್ದರು. ಇದರಿಂದ ಸಂಪಾದಿಸಿದ ಹಣದಲ್ಲಿ ಸಾಲ ತೀರಿಸಲು ಗುರು ಹಾಗೂ ಆತನ ಪತ್ನಿ ರೇಣುಕಾ ಯೋಜಿಸಿದ್ದರು. ತಮ್ಮ ಸ್ನೇಹಿತೆ ಅನುಶ್ರೀ ಆರ್ಯುವೇದಿಕ್ ಮಸಾಜ್ ಸೆಂಟರ್ ವಹಿವಾಟು ಬಗ್ಗೆ ಈ ದಂಪತಿ ಮಾಹಿತಿ ಪಡೆದಿದ್ದರು. ಅಂತೆಯೇ ಜ.12ರಂದು ಸೆಂಟರ್‌ಗೆ ಚಿಕಿತ್ಸೆ ನೆಪದಲ್ಲಿ ತೆರಳಿ ಅಲ್ಲಿನ ಭದ್ರತೆ ಕುರಿತು ಮಾಹಿತಿ ಕಲೆ ಹಾಕಿದ್ದ ಆರೋಪಿಗಳು, ಮರು ದಿನ ಪೂರ್ವನಿಯೋಜಿತ ಸಂಚಿನಂತೆ ಮಸಾಜ್‌ಗೆ ತೆರಳಿ ಅನುಶ್ರೀ ಅವರ ಮುಖಕ್ಕೆ ಮತ್ತಿನ ಮದ್ದು ಸಿಂಪಡಿಸಿ ಬಳಿಕ ಕೈ-ಕಾಲು ಕಟ್ಟಿ ಹಾಕಿ ಚಿನ್ನ ಹಾಗೂ ಹಣ ದೋಚಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.