ದೇಗುಲದಲ್ಲಿ ಕಳ್ಳತನ ಮಾಡಿ ಗೋಡೆ ಮೇಲೆ ಅನ್ಯಧರ್ಮದ ಚಿಹ್ನೆ ಬರೆದ ದುಷ್ಕರ್ಮಿಗಳು..!

| N/A | Published : Aug 08 2025, 01:01 AM IST / Updated: Aug 08 2025, 10:04 AM IST

ದೇಗುಲದಲ್ಲಿ ಕಳ್ಳತನ ಮಾಡಿ ಗೋಡೆ ಮೇಲೆ ಅನ್ಯಧರ್ಮದ ಚಿಹ್ನೆ ಬರೆದ ದುಷ್ಕರ್ಮಿಗಳು..!
Share this Article
  • FB
  • TW
  • Linkdin
  • Email

ಸಾರಾಂಶ

ಏಳೂರಮ್ಮನ ದೇವಸ್ಥಾನದಲ್ಲಿ ಗುರುವಾರ ಬೆಳಗಿನ ಜಾವ ಕಳ್ಳತನ ಮಾಡಿರುವ ದುಷ್ಕರ್ಮಿಗಳು ದೇವಸ್ಥಾನದ ಗೋಡೆ ಮೇಲೆ ಅನ್ಯಧರ್ಮದ ಚಿಹ್ನೆ ಬರೆದಿರುವ ವಿಲಕ್ಷಣ ಘಟನೆ ಮಳವಳ್ಳಿ ತಾಲೂಕಿನ ಕಿರುಗಾವಲು ಬಳಿಯ ಚಿಕ್ಕಮಾಳಿಗೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

  ಮಳವಳ್ಳಿ :  ಏಳೂರಮ್ಮನ ದೇವಸ್ಥಾನದಲ್ಲಿ ಗುರುವಾರ ಬೆಳಗಿನ ಜಾವ ಕಳ್ಳತನ ಮಾಡಿರುವ ದುಷ್ಕರ್ಮಿಗಳು ದೇವಸ್ಥಾನದ ಗೋಡೆ ಮೇಲೆ ಅನ್ಯಧರ್ಮದ ಚಿಹ್ನೆ ಬರೆದಿರುವ ವಿಲಕ್ಷಣ ಘಟನೆ ತಾಲೂಕಿನ ಕಿರುಗಾವಲು ಬಳಿಯ ಚಿಕ್ಕಮಾಳಿಗೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಗ್ರಾಮದ ಮುಖ್ಯರಸ್ತೆಯ ದೇವಸ್ಥಾನದ ಬೀಗ ಹೊಡೆದು ಒಳನುಗ್ಗಿರುವ ದುಷ್ಕರ್ಮಿಗಳು ಆರತಿ ತಟ್ಟೆಯಲ್ಲಿದ್ದ ಚಿಲ್ಲರೆ ಕಾಸು ತೆಗೆದುಕೊಂಡಿದ್ದಾರೆ. ನಂತರ ಹೊರಾಂಗಣದ ಗೋಡೆ ಮೇಲೆ 786 ಹಾಗೂ ಅನ್ಯಧರ್ಮದ ಚಿಹ್ನೆ ಬರೆದಿದ್ದಾರೆ.

ಇದಕ್ಕೂ ಮುನ್ನ ಗ್ರಾಮದ ದಂಡಿನ ಮಾರಮ್ಮನ ದೇವಸ್ಥಾನಕ್ಕೂ ನುಗ್ಗಿರುವ ದುಷ್ಕರ್ಮಿಗಳು ಕಳ್ಳತನ ಯತ್ನ ನಡೆಸಿ ಪರಾರಿಯಾಗಿದ್ದಾರೆ. ಆದರೆ, ಅಲ್ಲಿ ಯಾವುದೇ ಬರಹ ಕಂಡು ಬಂದಿಲ್ಲ. ಗ್ರಾಮದಲ್ಲಿ ಇಂಥೊಂದು ವಿಲಕ್ಷಣ ಘಟನೆ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿ.ಕೃಷ್ಣಪ್ಪ, ಸಿಪಿಐ ಬಿ.ಎಸ್.ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಿರುಗಾವಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಾಲೆ ಕಿಟಕಿಗಳಿಗೆ ಕಲ್ಲು ತೂರಿದ ಕಿಡಿಗೇಡಿಗಳು

ಪಾಂಡವಪುರ:  ತಾಲೂಕಿನ ಕೆ.ಬೆಟ್ಟಹಳ್ಳಿ ವಿನಾಯಕ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ವಿನಾಯಕ ಶಿಕ್ಷಣ ಸಂಸ್ಥೆಯ ಶಾಲೆಗಳ ಕಿಟಕಿಗಳಿಗೆ ಕಲ್ಲು ತೂರಿ ಗಾಜುಗಳನ್ನು ಒಡೆದು ಹಾಕಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ರಾತ್ರಿ ಶಾಲೆ ಹಿಂಬದಿಯಿಂದ ಕಿಡಿಗೇಡಿಗಳು ಕುಟಕಿ ಗಾಜುಗಳನ್ನು ಒಡೆದು ಹಾಕಿದ್ದು, ಗಾಜಿನ ಪುಡಿಗಳು ಎಲ್ಲಾ ಕೊಠಡಿಗಳಲ್ಲಿ ಹರಡಿದೆ. ಗುರುವಾರ ಎಂದಿನಂತೆ ಶಾಲೆಗೆ ಶಿಕ್ಷಕರು ಆಗಮಿಸಿದಾಗ ಎಲ್ಲಾ ಕೊಠಡಿಗಳಲ್ಲೂ ಗಾಜಿನ ಪುಡಿಗಳು ಕಂಡುಬಂದಿದ್ದು ತರಗತಿ ಪ್ರಾರಂಭಿಸಲು ತೊಂದರೆಯಾಗಿದೆ.

ಈ ಹಿಂದೆಯೂ ಎರಡು ಬಾರಿ ಇದೇ ರೀತಿಯ ಕೃತ್ಯ ಎಸಗಿರುತ್ತಾರೆ. ಈ ಕೃತ್ಯಗಳಿಂದ ಶಿಕ್ಷಕರು ಮತ್ತು ಮಕ್ಕಳಲ್ಲಿ ಭಯಭೀತಿ ಉಂಟಾಗಿದ್ದು, ಶೈಕ್ಷಣಿಕ ತೊಂದರೆಯಾಗಿದೆ. ಹೀಗಾಗಿ ಕಾನೂನು ಕ್ರಮವಹಿಸಿ ಈ ಕೃತ್ಯ ಎಸಗಿರುವ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಶಾಲೆ ಮುಖ್ಯಸ್ಥರು ಶ್ರೀರಂಗಪಟ್ಟಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.

Read more Articles on