ಸಾರಾಂಶ
ಬೆಂಗಳೂರು : ಮಡಿವಾಳ ಪೊಲೀಸ್ ಠಾಣೆ ಕಾನ್‌ಸ್ಟೇಬಲ್ ಶಿವರಾಜ್(30) ಅವರ ಮೃತದೇಹ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ಪಾಳು ಬಾವಿಯಲ್ಲಿ ಅರೆಬರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರಾಯಚೂರಿನ ದೇವದುರ್ಗ ಮೂಲದ ಶಿವರಾಜ್ 2020ನೇ ಸಾಲಿನಲ್ಲಿ ಸಿವಿಲ್ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದರು. ಕಳೆದ ನಾಲ್ಕು ವರ್ಷಗಳಿಂದ ಮಡಿವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿವರಾಜ್ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ದಂಪತಿ ಅನ್ಯೋನ್ಯವಾಗಿದ್ದರು. ಸುಬ್ರಮಣ್ಯಪುರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು.
ಜೂ.25ರಂದು ಮನೆಯಿಂದ ಕರ್ತವ್ಯಕ್ಕೆ ತೆರಳಿದ್ದ ಶಿವರಾಜ್, ಎರಡು ದಿನ ಕಳೆದರೂ ಮನೆಗೆ ವಾಪಸ್ ಬಂದಿರಲಿಲ್ಲ. ಕರ್ತವ್ಯಕ್ಕೂ ತೆರಳಿರಲಿಲ್ಲ. ಕರೆ ಮಾಡಿದರೆ ಮೊಬೈಲ್ ಸ್ವಿಚ್ಡ್ ಆಫ್ ಬಂದಿದೆ. ಹೀಗಾಗಿ ಅನುಮಾನಗೊಂಡ ತಂದೆ ಬಾಲಪ್ಪ ಅವರು ಶಿವರಾಜ್ ನಾಪತ್ತೆ ಬಗ್ಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಶಿವರಾಜ್ ಪತ್ತೆಗೆ ತನಿಖೆ ಕೈಗೊಂಡಿದ್ದರು. ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಶಿವರಾಜ್ ನಾಪತ್ತೆ ಬಗ್ಗೆ ಮಾಹಿತಿ ನೀಡಿದ್ದರು.
ಸಿಸಿಟಿವಿ ನೀಡಿದ ಸುಳಿವು:
ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡಿದಾಗ ಮೂರು ದಿನಗಳ ಹಿಂದೆ ಜಯನಗರದಲ್ಲಿ ಶಿವರಾಜ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವುದು ಪತ್ತೆಯಾಗಿತ್ತು. ಈ ಸುಳಿವು ಆಧರಿಸಿ ದ್ವಿಚಕ್ರ ವಾಹನ ಚಲಿಸಿದ ಮಾರ್ಗದ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲನೆ ಮಾಡಿದಾಗ, ಸೋಮವಾರ ಬೆಳಗ್ಗೆ ಜ್ಞಾನಭಾರತಿ ಮೆಟ್ರೋ ರೈಲು ನಿಲ್ದಾಣದ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಶಿವರಾಜ್ ಅವರ ದ್ವಿಚಕ್ರ ವಾಹನ ಪತ್ತೆಯಾಗಿದೆ. ಈ ಸಂಬಂಧ ಶಿವರಾಜ್ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದಾಗ, ಅವರು ಸ್ಥಳಕ್ಕೆ ಬಂದು ನೋಡಿದಾಗ ಅದು ಶಿವರಾಜ್ ಅವರದೇ ದ್ವಿಚಕ್ರ ವಾಹನ ಎಂಬುದು ಗೊತ್ತಾಗಿದೆ.
ಬಾವಿಯಲ್ಲಿ ಮೃತದೇಹ ಪತ್ತೆ:
ಮುಂದುವರೆದು, ಅಲ್ಲಿನ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಶಿವರಾಜ್ ಅವರು ಜ್ಞಾನಭಾರತಿ ಕ್ಯಾಂಪಸ್ ಪ್ರವೇಶಿಸಿರುವುದು ಗೊತ್ತಾಗಿದೆ. ಬಳಿಕ ಕ್ಯಾಂಪಸ್‌ನಲ್ಲಿ ಶೋಧಿಸಿದಾಗ ಪಾಳು ಬಾವಿಯಲ್ಲಿ ಮೃತದೇಹ ಅರೆಬರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಂತೆಯೇ ಬಾವಿಯ ದಡದಲ್ಲಿ ಶಿವರಾಜ್ ಅವರ ಚಪ್ಪಲಿಗಳು ಹಾಗೂ ಗುರುತಿನ ಚೀಟಿಗಳು ಪತ್ತೆಯಾದ್ದರಿಂದ ಅದು ಶಿವರಾಜ್ ಅವರದೇ ಮೃತದೇಹ ಎಂಬುದು ಖಾತರಿಯಾಗಿದೆ.
ನಂತರ ಪೊಲೀಸರು ಮೃತದೇಹವನ್ನು ಬಾವಿಯಿಂದ ಮೇಲಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಶಿವರಾಜ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪಾಳು ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶಿವರಾಜ್ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಈ ನಡುವೆ ಮೃತ ಶಿವರಾಜ್ ಅವರ ತಂದೆ ಬಾಲಪ್ಪ ಅವರು ತಮ್ಮ ಹಿರಿಯ ಪುತ್ರನ ಸೊಸೆ ವಾಣಿ ಮತ್ತು ಆಕೆಯ ಕುಟುಂಬದ ಸದಸ್ಯರ ಕಿರುಕುಳದಿಂದಲೇ ಪುತ್ರ ಶಿವರಾಜ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೊಸೆಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ?
ಮೃತ ಶಿವರಾಜ್ ಅವರ ಅಣ್ಣನ ಗೌರೀಶ್ ದಾವಣಗೆರೆ ಮೂಲದ ವಾಣಿ ಎಂಬುವವರನ್ನು ವಿವಾಹವಾಗಿದ್ದರು. ದಾಂಪತ್ಯದಲ್ಲಿ ಬಿರುಕು ಉಂಟಾದ ಹಿನ್ನೆಲೆಯಲ್ಲಿ ದಂಪತಿ ದೂರಾಗಿದ್ದರು. ಈ ನಡುವೆ ವಾಣಿ, ಪತಿ ಗೌರೀಶ್ ಕುಟುಂಬ ಹಾಗೂ ಶಿವರಾಜ್ ಕುಟುಂಬದ ವಿರುದ್ಧ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ದೌರ್ಜನ್ಯದ ಆರೋಪದಡಿ ದೂರು ನೀಡಿದ್ದರು. ಶಿವರಾಜ್‌ಗೆ ಕರೆ ಮಾಡಿ ಕೆಟ್ಟದಾಗಿ ಮಾತನಾಡಿದ್ದರು. ಶಿವರಾಜ್ ಕುಟುಂಬದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಾನಸಿಕ ಹಿಂಸೆ ನೀಡಿದ್ದರು ಎನ್ನಲಾಗಿದೆ. ಈ ಕೌಟುಂಬಿಕ ಕಲಹದಿಂದ ಮನನೊಂದು ಶಿವರಾಜ್ ಪಾಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.