ಸಾರಾಂಶ
ಬೆಂಗಳೂರು : ಇತ್ತೀಚೆಗೆ ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಹಿಮ್ಮುಖವಾಗಿ ಕಾರು ಚಲಾಯಿಸಿ ವಾಹನ ಸವಾರರಿಗೆ ತೊಂದರೆ ಉಂಟು ಮಾಡಿದ್ದ ಕಾರು ಚಾಲಕನನ್ನು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಮ್ಮಿಗೆಪುರದ ವಿಜಿಎಸ್ ಲೇಔಟ್ ನಿವಾಸಿ ಯದಯನ್(39) ಬಂಧಿತ ಕಾರು ಚಾಲಕ. ಈತನ ಕಾರು ಜಪ್ತಿ ಮಾಡಲಾಗಿದೆ. ಜೂ.26ರಂದು ಬೆಳಗ್ಗೆ 9 ಗಂಟೆಗೆ ಕಾರು ಚಾಲಕನೊಬ್ಬ ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಹೆಬ್ಬಾಳ ಕಡೆಯಿಂದ ಯಲಹಂಕ ಕಡೆಗೆ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ, ಇತರೆ ವಾಹನ ಸವಾರರಿಗೆ ತೊಂದರೆ ಉಂಟು ಮಾಡಿದ್ದ. ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದು ಎಕ್ಸ್ ಖಾತೆಯಲ್ಲಿ ನಗರ ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.
ಈ ವಿಡಿಯೋ ಆಧರಿಸಿ ಹೆಬ್ಬಾಳ ಸಂಚಾರ ಠಾಣೆ ಪೊಲೀಸರು, ಆ ಕಾರನ್ನು ಪತ್ತೆಹಚ್ಚಿ ಚಾಲಕನನ್ನು ಬಂಧಿಸಿದ್ದಾರೆ. ಉದಯನ್ ಕಾರಿಗೆ ಅರ್ಹತ ಪ್ರಮಾಣ ಪತ್ರ(ಎಫ್‌ಸಿ)ದ ಅವಧಿ ಮುಗಿದಿದೆ. ಅಂತೆಯೇ ಕಾರಿನ ವಿಮೆಯೂ ಚಾಲ್ತಿಯಲ್ಲಿ ಇಲ್ಲ. ಈ ಸಂಬಂಧ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಈ ರೀತಿ ಸಾಮಾಜಿಕ ಶಾಂತಿಗೆ ಭಂಗಕ್ಕೆ ಕಾರಣರಾಗುವವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.