ಹಣ ಕೊಡದ ಸ್ನೇಹಿತನ ಹೊಟ್ಟೆ ಕುಯ್ದ ಗೆಳೆಯ!

| Published : Feb 18 2024, 01:30 AM IST

ಸಾರಾಂಶ

ಮದ್ಯದ ಅಮಲಿನಲ್ಲಿ ಹಣದ ವಿಚಾರಕ್ಕೆ ನಡೆದ ಜಗಳದ ವೇಳೆ ಸ್ನೇಹಿತನಿಗೆ ಕಟರ್‌ ಬ್ಲೇಡ್‌ನಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮದ್ಯದ ಅಮಲಿನಲ್ಲಿ ಹಣದ ವಿಚಾರಕ್ಕೆ ನಡೆದ ಜಗಳದ ವೇಳೆ ಸ್ನೇಹಿತನಿಗೆ ಕಟರ್‌ ಬ್ಲೇಡ್‌ನಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರ್ತಪೇಟೆಯ ಸಂತೋಷ್‌ (26) ಬಂಧಿತ. ಆರೋಪಿಯು ಫೆ.15ರಂದು ರಾಜ ಅಲಿಯಾಸ್‌ ರಾಜರಾವ್‌ (25) ಎಂಬಾತನ ಮೇಲೆ ಕಟರ್‌ ಬ್ಲೇಡ್‌ನಿಂದ ಹೊಟ್ಟೆ ಹಾಗೂ ಭುಜದ ಭಾಗವನ್ನು ಕೊಯ್ದು ಕೊಲೆಗೆ ಯತ್ನಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ಆರೋಪಿ ಸಂತೋಷ್‌ ಮತ್ತು ಗಾಯಾಳು ರಾಜ ಹಲವು ವರ್ಷಗಳಿಂದ ಸ್ನೇಹಿತರು. ನಗರ್ತಪೇಟೆ, ಚಿಕ್ಕಪೇಟೆ ಸುತ್ತಮುತ್ತ ದಿನಗೂಲಿ ಮಾಡಿಕೊಂಡು ಜೀವನ ಮಾಡುತ್ತಾರೆ. ದುಶ್ಚಟಗಳ ದಾಸರಾಗಿರುವ ಇಬ್ಬರೂ ಮನೆಗಳಿಂದ ದೂರಾಗಿದ್ದು, ರಾತ್ರಿ ವೇಳೆ ಎಲ್ಲೆಂದರಲ್ಲಿ ಮಲಗುತ್ತಾರೆ. ಫೆ.15ರಂದು ಮಧ್ಯಾಹ್ನ ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿರುವ ವೈನ್‌ ಶಾಪ್‌ನಲ್ಲಿ ಮದ್ಯ ಸೇವಿಸಿ ಅಂಗಡಿಯೊಂದರ ಎದುರು ರಾಜ ಕುಳಿತಿದ್ದ. ಈ ವೇಳೆ ಪಾನಮತ್ತನಾಗಿ ಬಂದ ಆರೋಪಿ ಸಂತೋಷ್‌, ಮದ್ಯ ಸೇವಿಸಲು ಹಣ ಕೊಡುವಂತೆ ಕೇಳಿದ್ದಕ್ಕೆ ರಾಜ ಹಣ ಇಲ್ಲ ಎಂದಿದ್ದಾನೆ.

ಹಣದ ವಿಚಾರಕ್ಕೆ ಜಗಳ:

ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ವೇಳೆ ಆರೋಪಿ ಸಂತೋಷ್‌ ತನ್ನ ಜೇಬಿನಲ್ಲಿದ್ದ ಕಟರ್‌ ಬ್ಲೇಡ್‌ ಹೊರಗೆ ತೆಗೆದು ಹಣ ಕೊಡದಿದ್ದರೆ ಸಾಯಿಸುವುದಾಗಿ ಹೆದರಿಸಿದ್ದಾನೆ. ರಾಜ ಹಣ ಇಲ್ಲ ಎಂದಾಗ, ಆರೋಪಿ ಸಂತೋಷ್‌ ಏಕಾಏಕಿ ಕಟರ್‌ ಬ್ಲೇಡ್‌ನಿಂದ ರಾಜನ ಹೊಟ್ಟೆ ಹಾಗೂ ಭುಜದ ಭಾಗದಲ್ಲಿ ಹಲವು ಬಾರಿ ಕೊಯ್ದು ಪರಾರಿಯಾಗಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಾಜನನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿ ಸಂತೋಷ್‌ನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.