ಸಾರಾಂಶ
ಮದ್ದೂರು ಕುದುರಗುಂಡಿ ಪತ್ನಿ ಕೆ.ಜೆ.ಚೇತನ ಅವರ ಹ್ಯಾಂಡ್ ಬ್ಯಾಗ್ ನಲ್ಲಿದ್ದ 30 ಸಾವಿರ ನಗದು ಹಾಗೂ 1.50 ಲಕ್ಷ ರು. ಮೌಲ್ಯದ 25 ಗ್ರಾಂ ಚಿನ್ನದ ನಕ್ಲೇಸ್ 12 ಗ್ರಾಂ ತೂಕದ ಕಿವಿಯೋಲೆ ಬ್ಯಾಗ್ ನಲ್ಲಿದ್ದ ಆಧಾರ್ ಕಾರ್ಡ್, ಪಾಸ್ ಪುಸ್ತಕ ವನ್ನು ದುಷ್ಕರ್ಮಿಗಳು ಅಪಹರಿಸಿ ಪರಾರಿಯಾಗಿದ್ದಾರೆ.
ಮದ್ದೂರು : ಹಾಡಹಗಲೇ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಗೃಹಿಣಿ ಹ್ಯಾಂಡ್ ಬ್ಯಾಗ್ ಕಸಿದು ಅದರಲ್ಲಿದ್ದ ನಗದು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ.
ತಾಲೂಕಿನ ಕುದುರಗುಂಡಿ ಗ್ರಾಮದ ಎಂ.ಸಿ.ಸತೀಶ್ ಕುಮಾರ್ ಪತ್ನಿ ಕೆ.ಜೆ.ಚೇತನ ಅವರ ಹ್ಯಾಂಡ್ ಬ್ಯಾಗ್ ನಲ್ಲಿದ್ದ 30 ಸಾವಿರ ನಗದು ಹಾಗೂ 1.50 ಲಕ್ಷ ರು. ಮೌಲ್ಯದ 25 ಗ್ರಾಂ ಚಿನ್ನದ ನಕ್ಲೇಸ್ 12 ಗ್ರಾಂ ತೂಕದ ಕಿವಿಯೋಲೆ ಮತ್ತು ಜುಮುಕಿ ಹಾಗೂ ಬ್ಯಾಗ್ ನಲ್ಲಿದ್ದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ವನ್ನು ದುಷ್ಕರ್ಮಿಗಳು ಅಪಹರಿಸಿ ಪರಾರಿಯಾಗಿದ್ದಾರೆ.
ಬೇಸಿಗೆ ರಜಾ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಗೇರಿಯ ತನ್ನ ತಂಗಿ ಪ್ರಮೀಳಾ ಮನೆಗೆ ಹೋಗಿದ್ದ ತಾಯಿ ಮತ್ತು ಮಗಳನ್ನು ಕರೆತರಲು ಹೋಗಿದ್ದ ಚೇತನಾ ತಂಗಿ ಪ್ರಮೀಳಾ ಬಳಿ ಇದ್ದ ತನ್ನ ಚಿನ್ನಾಭರಣ ಗಳನ್ನು ಪಡೆದ ನಂತರ ತಾಯಿ ಮತ್ತು ಮಗಳೊಂದಿಗೆ ಮದ್ದೂರು ಬಸ್ ನಿಲ್ದಾಣದಲ್ಲಿ ಇಳಿದಿದ್ದರು.
ನಂತರ ಆಟೋದಲ್ಲಿ ಗೆಜ್ಜಲಗೆರೆಗೆ ಬಂದು ಗ್ರಾಮದ ಬರೋಡ ಬ್ಯಾಂಕ್ ಶಾಖೆಯಲ್ಲಿ ತನ್ನ ಖಾತೆಯಲ್ಲಿದ್ದ 25000 ಹಣವನ್ನು ಡ್ರಾ ಮಾಡಿ ಕೊಂಡು ಚಿನ್ನಾಭರಣ ವಿದ್ದ ಹ್ಯಾಂಡ್ ಬ್ಯಾಗಿನಲ್ಲಿ ಇಟ್ಟುಕೊಂಡು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಮೂಲಕ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ಇಬ್ಬರೂ ಅಪರಿಚಿತ ಯುವಕರು ಚೇತನ ಅವರ ಹ್ಯಾಂಡ್ ಬ್ಯಾಗ್ ನಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಘಟನೆಯಿಂದ ಆತಂಕಗೊಂಡ ಚೇತನ ಬೈಕ್ ನಲ್ಲಿ ತೆರಳುತ್ತಿದ್ದ ಯುವಕರನ್ನು ಹಿಡಿದುಕೊಳ್ಳುವಂತೆ ಕೂಗಿಕೊಂಡಿದ್ದಾರೆ. ಸಾರ್ವಜನಿಕರು ಸ್ಥಳಕ್ಕೆ ದಾವಿಸುವಷ್ಟರಲ್ಲಿ ದುಷ್ಕರ್ಮಿಗಳು ಬೈಕ್ ಸಮೇತ ಹೆದ್ದಾರಿಯ ಸರ್ವಿಸ್ ರಸ್ತೆಯ ಮೂಲಕ ಕಾಡು ದಾರಿಯಲ್ಲಿ ಪರಾರಿಯಾಗಿದ್ದಾರೆ.
ಈ ಸಂಬಂಧ ಮದ್ದೂರು ಪೊಲೀಸರು ಚೇತನ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪರಾಧ ವಿಭಾಗದ ಪೊಲೀಸರ ತಂಡ ಘಟನೆ ನಡೆದ ಹೂಗಳತೆ ದೂರದಲ್ಲಿರುವ ಗ್ರಾಪಂ, ಹೆದ್ದಾರಿ ಮಾರ್ಗದ ಪೆಟ್ರೋಲ್ ಬಂಕ್ ಮತ್ತು ರೆಸ್ಟೋರೆಂಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿರುವ ಮನೆಗಳ ಸಿಸಿ ಕ್ಯಾಮೆರಾ ಗಳಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಕಲೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮದ್ದೂರು ಪಟ್ಟಣದ ಬಡಾವಣೆಗಳು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ನಡೆಯುತ್ತಿರುವ ಸರಗಳ್ಳತನದ ಪ್ರಕರಣದ ಬಗ್ಗೆ ಆರೋಪಿಗಳ ಪತ್ತೆಗಾಗಿ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆ ಬೆನ್ನಲ್ಲೇ ಗೆಜ್ಜಲಗೆರೆ ಗ್ರಾಮದಲ್ಲಿ ನಡೆದಿರುವ ಚಿನ್ನಾಭರಣ ಲೂಟಿ ಪ್ರಕರಣ ದಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.