ಬೆಂಗಳೂರಿನಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಹೃದಯಾಘಾತ ಎಂದು ಬಿಂಬಿಸಿದ ಪತಿ ಬಂಧನ

| Published : Sep 22 2024, 01:55 AM IST / Updated: Sep 22 2024, 04:41 AM IST

ಸಾರಾಂಶ

ಬೆಂಗಳೂರಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು, ಹೃದಯಾಘಾತ ಎಂದು ಬಿಂಬಿಸಲು ಯತ್ನಿಸಿದ್ದ ಪತಿಯನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಹೃದಯಾಘಾತ ಎಂದು ಬಿಂಬಿಸಲು ಯತ್ನಿಸಿದ್ದ ಪತಿಯನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಿಟಿಎಸ್ ಲೇಔಟ್ ನಿವಾಸಿ ಸೈಯದ್‌ ಜಮೀರ್ ಬಂಧಿತನಾಗಿದ್ದು, ಮನೆಯಲ್ಲಿ ಶುಕ್ರವಾರ ಸಂಜೆ ತನ್ನ ಪತ್ನಿ ಸೈಯದ್ ಸಮೀರಾಳನ್ನು (40) ಉಸಿರುಗಟ್ಟಿಸಿ ಆತ ಕೊಲೆ ಮಾಡಿದ್ದ. ಈ ಹತ್ಯೆ ಬಳಿಕ ಮೃತಳ ಸೋದರ ಸಂಬಂಧಿಗೆ ಕರೆ ಮಾಡಿ ಹೃದಯಾಘಾತದಿಂದ ಸಮೀರಾ ಮೃತಪಟ್ಟಿದ್ದಾಳೆ ಎಂದು ಸೈಯದ್ ಹೇಳಿದ್ದ. 

ಈ ಮಾಹಿತಿ ತಿಳಿದ ಮೃತಳ ಮನೆಗೆ ಧಾವಿಸಿದ ಸಂಬಂಧಿಕರು, ಸಮೀರಾಳ ಸಾವಿನ ಬಗ್ಗೆ ಶಂಕೆಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಈ ಮಾಹಿತಿ ಮೇರೆಗೆ ಸೈಯದ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.

15 ವರ್ಷಗಳ ಹಿಂದೆ ಹೊಸೂರು ಮತ್ತಿಕೆರೆಯ ಸೈಯದ್ ಸಮೀರಾ ಹಾಗೂ ಪೆಂಟರ್ ಸೈಯದ್‌ ಜಮೀರ್ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇತ್ತೀಚಿಗೆ ಕೌಟುಂಬಿಕ ಕಾರಣಕ್ಕೆ ದಂಪತಿ ಮಧ್ಯೆ ಮನಸ್ತಾಪವಾಗಿದ್ದು, ಇದೇ ಕಾರಣಕ್ಕೆ ಆಗಾಗ್ಗೆ ಮನೆಯಲ್ಲಿ ಪರಸ್ಪರ ಜಗಳವಾಡುತ್ತಿದ್ದರು. ಎಂದಿನಂತೆ ಶುಕ್ರವಾರ ಮಧ್ಯಾಹ್ನ ಸಹ ಸತಿ-ಪತಿ ಜಗಳವಾಡಿದ್ದರು. ಆಗ ಪತ್ನಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಸಮೀರ್ ಹತ್ಯೆ ಮಾಡಿದ್ದಾನೆ. ಈ ಹತ್ಯೆ ನಡೆದಾಗ ಮೃತಳ ಮಕ್ಕಳು ಟ್ಯೂಷನ್‌ಗೆ ಹೋಗಿದ್ದರು. ಹೀಗಾಗಿ ಮನೆಯಲ್ಲಿ ಏಕಾಂಗಿಯಾಗಿದ್ದ ಪತ್ನಿ ಮೇಲೆ ಆರೋಪಿ ಗಲಾಟೆ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.