ಮಕ್ಕಳಿಗೆ ಇಟ್ಟಿದ ಕೊಬ್ಬರಿ ಮಿಠಾಯಿಯನ್ನೂ ಬಿಡದ ಕದೀಮರು..!

| Published : Oct 02 2024, 01:05 AM IST

ಸಾರಾಂಶ

ಮನೆಯಲ್ಲಿ ಶಾಲೆಯಿಂದ ಬರುವ ನಮ್ಮ ಮಕ್ಕಳಿಗೆ ಎಂದು ತಂದು ಇಟ್ಟಿದ್ದ ಕೊಬ್ಬರಿ ಮಿಠಾಯಿಗಳನ್ನು ತಿಂದು ನೀರನ್ನು ಕುಡಿದು ಕಳ್ಳರು ಹೋಗಿದ್ದಾರೆ. ಈ ಬಗ್ಗೆ ಬೆನಮನಹಳ್ಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದ ಪೊಲೀಸರು.

ಕನ್ನಡಪ್ರಭ ವಾರ್ತೆ ಹಲಗೂರು

ಮನೆ ಬಾಗಿಲ ಬೀಗ ಮುರಿದು ಒಳನುಗ್ಗಿ ಬೀರುವಿನಲ್ಲಿದ್ದ ಲಕ್ಷಾಂತ ರು ನಗದು, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆನಮನಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ಪುಟ್ಟಸ್ವಾಮಿ ಪುತ್ರ ರವಿ ಸಂಬಂಧಿಕರ ಆರಾಧನೆಗೆಂದು ಇಗ್ಗಲೂರು ಗ್ರಾಮಕ್ಕೆ ತೆರಳಿದ್ದರು. ಕಾರ್ಯ ಮುಗಿದ ನಂತರ ವಾಪಸ್ ಸ್ವಗ್ರಾಮಕ್ಕೆ ಮಧ್ಯಾಹ್ನ ಬಂದಾಗ ಮನೆ ಬಾಗಿಲ ಬೀಗವನ್ನು ಹೊಡೆದಿರುವುದು ಗೊತ್ತಾಗಿದೆ.

ತಕ್ಷಣ ಮನೆಯೊಳಗೆ ಬಂದು ನೋಡಿದಾಗ ಒಂದು ಟ್ರಂಕ್ , ಬೀರಿನಲ್ಲಿದ್ದ 132 ಗ್ರಾಂ ಚಿನ್ನ, 60 ಗ್ರಾಂ ಬೆಳ್ಳಿ ಮತ್ತು ಒಂದು ಲಕ್ಷದ ಮೂವತ್ತೆರಡು ಸಾವಿರ ನಗದು ದೋಚಿರುವುದು ಗೊತ್ತಾಗಿದೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್ ಠಾಣಾಧಿಕಾರಿ ಬಿ. ಮಹೇಂದ್ರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂಬಂಧ ರವಿ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್ಪಿ ಗಂಗಾಧರಸ್ವಾಮಿ, ಡಿವೈಎಸ್ಪಿ ಪಿ.ಕೃಷ್ಣಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಮತ್ತು ಶ್ವಾನದಳ , ಬೆರಳು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯಲ್ಲಿ ಶಾಲೆಯಿಂದ ಬರುವ ನಮ್ಮ ಮಕ್ಕಳಿಗೆ ಎಂದು ತಂದು ಇಟ್ಟಿದ್ದ ಕೊಬ್ಬರಿ ಮಿಠಾಯಿಗಳನ್ನು ತಿಂದು ನೀರನ್ನು ಕುಡಿದು ಕಳ್ಳರು ಹೋಗಿದ್ದಾರೆ ಎಂದು ರವಿ ಕನ್ನಡಪ್ರಭ ಪ್ರತಿನಿಧಿಗೆ ತಿಳಿಸಿದ್ದಾರೆ.