ಪ್ರೇಯಸಿಯರ ಜತೆಗೆ ಜಾಲಿ ರೈಡ್‌ ಹೋಗಲು ಬೈಕ್‌ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

| Published : Dec 10 2024, 01:16 AM IST / Updated: Dec 10 2024, 05:39 AM IST

Fraud couple arrested

ಸಾರಾಂಶ

ಪ್ರೇಯಸಿಯರ ಜತೆಗೆ ಜಾಲಿ ರೈಡ್‌ ಹೋಗಲು ಬೈಕ್‌ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 10 ವರ್ಷದ ಬಳಿಕ ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು : ಪ್ರೇಯಸಿಯರ ಜತೆಗೆ ಜಾಲಿ ರೈಡ್‌ ಹೋಗಲು ಬೈಕ್‌ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 10 ವರ್ಷದ ಬಳಿಕ ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಟಿಪ್ಪು ನಗರ ನಿವಾಸಿ ಆಸೀಫ್‌(32) ಬಂಧಿತ. ಆರೋಪಿಯು 2014ನೇ ಸಾಲಿನಲ್ಲಿ ಬೈಕ್‌ ಕಳವು ಮಾಡಿದ್ದನು. ಈ ಸಂಬಂಧ ಹಲಸೂರು ಗೇಟ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು, ಆದರೆ, ಆರೋಪಿಯು ಪೊಲೀಸರ ಕೈಗೆ ಸಿಕ್ಕಿರಲಿಲ್ಲ.

ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ದೀರ್ಘಕಾಲದಿಂದ ಪತ್ತೆಯಾಗದ ಪ್ರಕರಣಗಳ ಆರೋಪಿಗಳ ಬಂಧನಕ್ಕೆ ರಚಿಸಲಾಗಿದ್ದ ಪೊಲೀಸರ ವಿಶೇಷ ತಂಡ ಆರೋಪಿಗಾಗಿ ಹುಡುಕಾಟದಲ್ಲಿ ತೊಡಗಿದ್ದರು. ಈ ನಡುವೆ ಮದುವೆಯಾಗಿದ್ದ ಆರೋಪಿ ಆಸೀಫ್‌, ನಗರದಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದನು.ಇತ್ತೀಚೆಗೆ ಆರೋಪಿ ಮೆಜೆಸ್ಟಿಕ್‌ನಲ್ಲಿ ಆಟೋ ಓಡಿಸುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.

ಹಲವು ಪ್ರಕರಣಗಳಲ್ಲಿ ಭಾಗಿ:

ಆರೋಪಿ ಆಸೀಫ್‌ ವಿರುದ್ಧ ಈ ಹಿಂದೆ ಕೆ.ಆರ್‌.ಮಾರುಕಟ್ಟೆ, ಜಯನಗರ, ಉಪ್ಪಾರಪೇಟೆ, ಕಪಾಸಿಪಾಳ್ಯ ಪೊಲೀಸ್‌ ಠಾಣೆಗಳಲ್ಲಿ ಬೈಕ್‌ ಕಳವು, ಸುಲಿಗೆ ಸೇರಿ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದ ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಆ ಪ್ರಕರಣಗಳ ಸಂಬಂಧವೂ ಪೊಲೀಸರು ಆರೋಪಿ ಬಂಧನಕ್ಕಾಗಿ ಹುಡುಕಾಟದಲ್ಲಿ ನಿರತರಾಗಿದ್ದರು.

ಜಾಲಿ ರೈಡ್‌ಗೆ ಬೈಕ್‌ ಕಳವು: ಆರೋಪಿ ಆಸೀಫ್‌ ಈ ಹಿಂದೆ ಪ್ರೇಯಸಿಯರ ಜತೆಗೆ ಮೋಜು-ಮಸ್ತಿ, ಜಾಲಿ ರೈಡ್‌ ಕರೆದೊಯ್ಯಲು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಬೈಕ್‌ ಕಳವು, ದರೋಡೆ, ಸುಲಿಗೆಯಂತ ಕೃತ್ಯಗಳಲ್ಲಿ ತೊಡಗಿದ್ದ. ಕದ್ದ ಬೈಕ್‌ನಲ್ಲಿ ಪ್ರೇಯಸಿಯರನ್ನು ಸುತ್ತಾಡಿಸಿ ಬಳಿಕ ಖಾಲಿ ಜಾಗಗಳಲ್ಲಿ ಆ ಬೈಕ್‌ಗಳನ್ನು ಬಿಟ್ಟು ಹೋಗುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.