ಸಾರಾಂಶ
ಬೆಂಗಳೂರು : ಕೊಲೆಗೆ ಯತ್ನ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಗದೆ ಬರೋಬ್ಬರಿ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಆಲೂರು ಗ್ರಾಮದ ನಿವಾಸಿ ದೊಡ್ಡೇಗೌಡ ಅಲಿಯಾಸ್ ಚಂದ್ರು(45) ಬಂಧಿತ. ಆರೋಪಿಯು 2005ರಲ್ಲಿ ಹನುಮಂತನಗರದ 50 ಅಡಿ ರಸ್ತೆಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಬೇಕರಿ ಮಾಲೀಕನ ಜತೆಗೆ ಜಗಳ ಮಾಡಿಕೊಂಡು ಕೆಲಸ ಬಿಟ್ಟಿದ್ದ. ಈ ದ್ವೇಷದ ಹಿನ್ನೆಲೆಯಲ್ಲಿ 2005ರ ಜ.13ರ ರಾತ್ರಿ ಸುಮಾರು 8.30ಕ್ಕೆ ಬೇಕರಿ ಮಾಲೀಕನ ಮನೆಗೆ ನುಗ್ಗಿ ಅವರ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. ಈ ಸಂಬಂಧ ಹನುಮಂತನಗರ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯ ಪತ್ತೆಗೆ ಹುಡುಕಾಡಿದ್ದರು. ಆದರೆ, ಆತ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ಆರೋಪಿಯ ಬಂಧನಕ್ಕೆ ಹಲವು ಬಾರಿ ವಾರೆಂಟ್ ಹೊರಡಿಸಿತ್ತು. ಆರೋಪಿಯು ಪತ್ತೆಯಾಗದ ಹಿನ್ನೆಲೆಯಲ್ಲಿ 2020ನೇ ಸಾಲಿನಲ್ಲಿ ಈ ಪ್ರಕರಣವನ್ನು ಲಾಂಗ್ ಪೆಂಡಿಂಗ್ ರಿಪೋರ್ಟ್(ಎಲ್‌ಪಿಆರ್) ಪ್ರಕರಣವೆಂದು ಆದೇಶಿಸಿತ್ತು.
ಕೃಷಿ ಮಾಡಿಕೊಂಡಿದ್ದ: ಇತ್ತೀಚೆಗೆ ಎಲ್‌ಪಿಆರ್ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದರು. ಕೊಲೆಗೆ ಯತ್ನ ಪ್ರಕರಣದ ಆರೋಪಿಯಾಗಿದ್ದ ದೊಡ್ಡೇಗೌಡ ಹಾಸನ ಜಿಲ್ಲೆಯ ಆಲೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಊರಿನಲ್ಲಿ ವ್ಯವಸಾಯದ ಜತೆಗೆ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಸದ್ಯ ಆರೋಪಿಯನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.