ಗೋವಾಗೆ ತೆರಳಲು ಹಣ ಕೊಡದ ಅತ್ತೆ ಕತ್ತು ಹಿಸುಕಿ ಬೆಂಕಿ ಇಟ್ಟ!

| Published : Feb 28 2024, 02:39 AM IST / Updated: Feb 28 2024, 09:33 AM IST

CRIME IN

ಸಾರಾಂಶ

ದುಶ್ಚಟಗಳ ದಾಸನಾಗಿರುವ ಜಶ್ವಂತ್‌ ರೆಡ್ಡಿ ವಾರಂತ್ಯ ಹಾಗೂ ರಜೆ ದಿನಗಳಲ್ಲಿ ಬೆಂಗಳೂರಿಗೆ ಬರುತ್ತಿದ್ದ. ಖರ್ಚಿಗೆ ಹಣ ಇಲ್ಲದಿರುವುದಾಗ ತನ್ನ ಮಾವನ ಹೆಂಡತಿ ಸುಕನ್ಯಾ ಅವರ ಬಳಿ ಆಗಾಗ ಸ್ವಲ್ಪ ಹಣ ಪಡೆಯುತ್ತಿದ್ದ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗೋವಾಗೆ ಹೋಗಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಅತ್ತೆಯ ಕತ್ತು ಹಿಸುಕಿ ಕೊಲೆಗೈದು ಬಳಿಕ ಮೃತದೇಹದ ಮೇಲೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿ ಸುಟ್ಟು ಪರಾರಿಯಾಗಿದ್ದ ಬಿಟೆಕ್‌ ವಿದ್ಯಾರ್ಥಿಯನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡತೋಗೂರಿನ ಜಶ್ವಂತ್‌ ರೆಡ್ಡಿ (21) ಬಂಧಿತ. ಆರೋಪಿಯು ಫೆ. 12ರಂದು ತನ್ನ ತಾಯಿಯ ತಮ್ಮನ ಹೆಂಡತಿ ಸುಕನ್ಯಾ(37) ಎಂಬಾಕೆಯನ್ನು ಕೊಲೆಗೈದು ಮೃತದೇಹವನ್ನು ಸುಟ್ಟಿ ಸಾಕ್ಷ್ಯ ನಾಶಪಡಿಸಿ ಪರಾರಿಯಾಗಿದ್ದ. 

ಕೊಲೆಯಾದ ಸುಕನ್ಯಾ ಪತಿ ನರಸಿಂಹ ರೆಡ್ಡಿ ನೀಡಿದ ನಾಪತ್ತೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ?
 ಆಂಧ್ರಪ್ರದೇಶ ಮೂಲದ ದೂರುದಾರ ನರಸಿಂಹ ರೆಡ್ಡಿ ತನ್ನ ಕುಟುಂಬದೊಂದಿಗೆ ಹಲವು ವರ್ಷಗಳಿಂದ ನಗರದ ದೊಡ್ಡತೋಗೂರಿನಲ್ಲಿ ನೆಲೆಸಿದ್ದಾರೆ. 

ಈತನ ಅಕ್ಕ ಮಗ ಆರೋಪಿ ಜಶ್ವಂತ್‌ ರೆಡ್ಡಿಗೆ ತಂದೆ ಇಲ್ಲ. ತಾಯಿ ದೊಡ್ಡತೋಗೂರಿನಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದಾರೆ. ಆರೋಪಿ ಕಳೆದ ಮೂರು ವರ್ಷಗಳಿಂದ ಆಂಧ್ರಪ್ರದೇಶದ ವಿಜಯವಾಡದ ಕಾಲೇಜೊಂದರಲ್ಲಿ ಬಿಟೆಕ್‌ ವ್ಯಾಸಂಗ ಮಾಡುತ್ತಿದ್ದಾನೆ.

ದುಶ್ಚಟಗಳ ದಾಸನಾಗಿರುವ ಈತ ವಾರಂತ್ಯ ಹಾಗೂ ರಜೆ ದಿನಗಳಲ್ಲಿ ಬೆಂಗಳೂರಿಗೆ ಬರುತ್ತಿದ್ದ. ಇಲ್ಲಿ ಸ್ನೇಹಿತರ ಜತೆ ಸೇರಿಕೊಂಡು ಪಾರ್ಟಿ ಮಾಡಿ ಬಳಿಕ ವಿಜಯವಾಡಕ್ಕೆ ತೆರಳುತ್ತಿದ್ದ. ಖರ್ಚಿಗೆ ಹಣ ಇಲ್ಲದಿರುವುದಾಗ ತನ್ನ ಮಾವನ ಹೆಂಡತಿ ಸುಕನ್ಯಾ ಅವರ ಬಳಿ ಆಗಾಗ ಸ್ವಲ್ಪ ಹಣ ಪಡೆಯುತ್ತಿದ್ದ.

ಸ್ನೇಹಿತರ ಜತೆಗೆ ಗೋವಾಗೆ ಟ್ರಿಪ್‌ ಪ್ಲಾನ್‌: ಆರೋಪಿ ಜಶ್ವಂತ್‌ ರೆಡ್ಡಿ ಖರ್ಚಿಗೆ ಹಣ ಇಲ್ಲದಿದ್ದರೂ ಸ್ನೇಹಿತರ ಜತೆಗೆ ಗೋವಾ ಪ್ರವಾಸ ತೆರಳಲು ತೀರ್ಮಾನಿಸಿದ್ದ. ಹೈದರಾಬಾದ್‌ನಿಂದ ಬಾಡಿಗೆಗೆ ಕಾರು ಪಡೆದು ಫೆ.12ರ ಸಂಜೆ ಬೆಂಗಳೂರಿಗೆ ಬಂದಿದ್ದಾನೆ. 

ಈ ವೇಳೆ ತನ್ನ ಮಾವನ ಹೆಂಡತಿ ಸುಕನ್ಯಾಗೆ ಕರೆ ಮಾಡಿ ಬೆಂಗಳೂರಿಗೆ ಬಂದಿರುವ ವಿಚಾರ ತಿಳಿಸಿದ್ದಾನೆ. ಆಕೆ ಕೆಲಸದ ಸ್ಥಳದಲ್ಲಿ ಇರುವುದಾಗಿ ಹೇಳಿದ್ದು, ಅಲ್ಲಿಗೆ ತೆರಳಿ, ಸುಕನ್ಯಾರನ್ನು ಕಾರಿನಲ್ಲಿ ಕೂರಿಸಿಕೊಂಡು ಸ್ವಲ್ಪ ದೂರು ತೆರಳಿದ್ದಾನೆ.

ಹಣ ಇಲ್ಲ ಎಂದಾಗ ಚಿನ್ನ ಸರಕ್ಕೆ ಬೇಡಿಕೆ: ಬಳಿಕ ತಾನು ಸ್ನೇಹಿತರ ಜತೆಗೆ ಗೋವಾಗೆ ತೆರಳಬೇಕು, ಖರ್ಚಿಗೆ ಹಣವಿಲ್ಲ. ಸ್ವಲ್ಪ ಹಣ ಇದ್ದರೆ ಕೊಡಿ ಎಂದು ಕೇಳಿದ್ದಾನೆ. ಆಗ ಸುಕನ್ಯಾ ತನ್ನ ಬಳಿ ಹಣವಿಲ್ಲ ಎಂದಿದ್ದು, ಆಕೆ ಕತ್ತಿನಲ್ಲಿ ಚಿನ್ನದ ಸರ ಇರುವುದನ್ನು ಆರೋಪಿ ಗಮನಿಸಿದ್ದಾನೆ.

ಆ ಚಿನ್ನದ ಸರ ಕೊಡಿ, ಅಡವಿಟ್ಟು ಹಣ ಪಡೆದು ಗೋವಾಗೆ ಹೋಗಿ ಬರುತ್ತೆನೆ. ನಾಲ್ಕೈದು ದಿನಗಳಲ್ಲಿ ಮತ್ತೆ ಆ ಸರವನ್ನು ಬಿಡಿಸಿ ಕೊಡುತ್ತೇನೆ ಎಂದಿದ್ದಾನೆ. ಇದಕ್ಕೆ ಸುಕನ್ಯಾ ಒಪ್ಪಿಲ್ಲ. 

ಇದರಿಂದ ಕೋಪಗೊಂಡ ಆರೋಪಿ ಜಶ್ವಂತ್‌ ರೆಡ್ಡಿ, ಸುಕನ್ಯಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಪೆಟ್ರೋಲ್‌ ಖರೀದಿಸಿ ತಂದು ನಿರ್ಜನಪ್ರದೇಶದಲ್ಲಿ ಮೃತದೇಹ ಇರಿಸಿ ಬೆಂಕಿ ಹಚ್ಚಿ, ಸುಕನ್ಯಾಳ ಚಿನ್ನದ ಸರವನ್ನು ತೆಗೆದುಕೊಂಡು ಸ್ನೇಹಿತರ ಜತೆಗೆ ಗೋವಾ ಪ್ರವಾಸಕ್ಕೆ ತೆರಳಿದ್ದಾನೆ. ಗೋವಾದಲ್ಲಿ ಮೋಜು-ಮಸ್ತಿ ಮಾಡಿ ಬಳಿಕ ವಿಜಯವಾಡಕ್ಕೆ ವಾಪಾಸ್‌ ಆಗಿ ತನ್ನಪಾಡಿಗೆ ತಾನು ಆರಾಮಾಗಿದ್ದ.

ಪತಿಯಿಂದ ನಾಪತ್ತೆ ದೂರು: ಮತ್ತೊಂದೆಡೆ ರಾತ್ರಿಯಾದರೂ ಪತ್ನಿ ಸುಕನ್ಯಾ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಪತಿ ನರಸಿಂಹರೆಡ್ಡಿ, ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಗೆ ತೆರಳಿ ನಾಪತ್ತೆ ದೂರು ನೀಡಿದ್ದರು. 

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆಕೆಯ ಮೊಬೈಲ್‌ ಕರೆಗಳನ್ನು ಪರಿಶೀಲಿಸುವಾಗ ಸಿಕ್ಕ ಸುಳಿವಿನ ಮೇರೆಗೆ ಆರೋಪಿ ಜಶ್ವಂತ್‌ ರೆಡ್ಡಿ ಬಗ್ಗೆ ಅನುಮಾನ ಬಂದಿದೆ. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಿಸಿದ್ದು, ಕೊಲೆ ರಹಸ್ಯ ಬಯಲಾಗಿದೆ.

ಗೊಂದಲದ ಹೇಳಿಕೆ ನೀಡಿ ಸಿಕ್ಕಿಬಿದ್ದ: ತನಿಖೆ ವೇಳೆ ಆರೋಪಿ ಸುಕನ್ಯಾಗೆ ಕರೆ ಮಾಡಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಜಶ್ವಂತ್‌ ರೆಡ್ಡಿಯನ್ನು ನಗರಕ್ಕೆ ಕರೆಸಿಕೊಂಡಿದ್ದಾರೆ. 

ಆರಂಭದಲ್ಲಿ ಯಾವುದೇ ಅನುಮಾನ ಬಾರದ ಹಾಗೆ ವರ್ತಿಸಿದ ಆರೋಪಿಯು ಫೆ.12ರಂದು ಎಲ್ಲಿದ್ದೆ ಎಂದು ಕೇಳಿದಾಗ ಬೆಂಗಳೂರು ಎಂದಿದ್ದಾನೆ. ಎಲ್ಲೆಲ್ಲಿ ಹೋಗಿದ್ದೆ ಎಂದು ಕೇಳಿದಾಗ ಸಮರ್ಪಕ ಉತ್ತರ ನೀಡಿಲ್ಲ. 

ಇದರಿಂದ ಪೊಲೀಸರಿಗೆ ಅನುಮಾನ ಮತ್ತಷ್ಟು ಬಲವಾಗಿದೆ. ವಶಕ್ಕೆ ಪಡೆದು ಪೊಲೀಸ್‌ ಭಾಷೆಯಲ್ಲಿ ವಿಚಾರಣೆ ಮಾಡಿದಾಗ ಸುಕನ್ಯಾ ಕೊಲೆ ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.