ಬೆಂಗಳೂರು : ರಸ್ತೆ ಮಧ್ಯೆ ಗಲಾಟೆ ತಡೆದ ಪೊಲೀಸ್‌ ಮೇಲೆ ಹಲ್ಲೆಗೈದ ! ಜೈಲು ಸೇರಿದ

| Published : Nov 25 2024, 01:30 AM IST / Updated: Nov 25 2024, 04:22 AM IST

ಸಾರಾಂಶ

ರಸ್ತೆ ಮಧ್ಯೆ ನಡೆಯುತ್ತಿದ್ದ ಗಲಾಟೆ ತಡೆದ ಪೊಲೀಸ್‌ ಮೇಲೆ ವ್ಯಕ್ತಿಯೊಬ್ಬ ನಿಮ್ಮನ್ನು ಕರೆದದ್ದು ಯಾರು ಎಂದು ಹಲ್ಲೆ ನಡೆಸಿ ಜೈಲು ಸೇರಿದ್ದಾನೆ.

 ಬೆಂಗಳೂರು : ಹೊಯ್ಸಳ ಗಸ್ತು ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಯುವಕನೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಗಲೂರು ಸಮೀಪದ ಬಿ.ಕೆ.ಹಳ್ಳಿ ನಿವಾಸಿ ನಾಗೇಶ್‌ (30) ಬಂಧಿತ. ಶನಿವಾರ ತಡರಾತ್ರಿ ಬಾಗಲೂರಿನ ದಾಳಮ್ಮ ಸರ್ಕಲ್‌ ಬಳಿ ಹೊಯ್ಸಳ ಗಸ್ತು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್‌ ಮೇಲೆ ಹಲ್ಲೆ ಮಾಡಿದ್ದ.

ಶನಿವಾರ ತಡರಾತ್ರಿ ದಾಳಮ್ಮ ಸರ್ಕಲ್‌ ಬಳಿ ಟ್ಯಾಕ್ಸಿ ವಿಚಾರಕ್ಕೆ ಇಬ್ಬರು ವ್ಯಕ್ತಿಗಳ ನಡುವೆ ಗಲಾಟೆಯಾಗುತ್ತಿತ್ತು. ಇದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಈ ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಗಲಾಟೆಯಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಜನರ ಗುಂಪಿನಿಂದ ಏಕಾಏಕಿ ಬಂದ ಆರೋಪಿ ನಾಗೇಶ್‌, ನಿಮ್ಮನ್ನು ಇಲ್ಲಿಗೆ ಯಾರು ಕರೆದರು ಎಂದು ಪೊಲೀಸರ ಜತೆಗೆ ಜಗಳ ಮಾಡಿದ್ದಾನೆ. ಈ ವೇಳೆ ಹೆಡ್‌ ಕಾನ್‌ಸ್ಟೇಬಲ್‌ ಮಲ್ಲಿಕಾರ್ಜುನ್‌ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಬಳಿಕ ಆತನನ್ನು ಹೋಯ್ಸಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಲ್ಲಿಕಾರ್ಜುನ್‌ ನೀಡಿದ ದೂರಿನ ಮೇರೆಗೆ ಬಾಗಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿ ನಾಗೇಶ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.