ಸಾರಾಂಶ
ಬೆಂಗಳೂರು : ಸಿನಿಮಾ ನಟಿಯ ತಾಯಿ ಬಳಿ 575 ಗ್ರಾಂ ಚಿನ್ನಾಭರಣ ಪಡೆದು ಬಳಿಕ ವಾಪಾಸ್ ನೀಡದೆ ವಂಚಿಸಿದ ಆರೋಪದಡಿ ಕನ್ನಡದ ‘ರಣಾಕ್ಷ’ ಸಿನಿಮಾ ನಿರ್ಮಾಪಕನ ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರಹಳ್ಳಿ ಮುಖ್ಯರಸ್ತೆಯ ಡಾ। ಸುನಂದಾ ಮಹಾಂತ ಶೆಟ್ಟಿ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು, ನ್ಯಾಯಾಲಯದ ಸೂಚನೆ ಮೇರೆಗೆ ನಿರ್ಮಾಪಕ ಎನ್.ಎಸ್.ಶಿವರಾಮ್ (36) ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಏನಿದು ದೂರು:
ನಿರ್ಮಾಪಕ ಶಿವರಾಮ್ 2023ರಲ್ಲಿ ರಣಾಕ್ಷ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರು. ಈ ಸಿನಿಮಾಗೆ ದೂರುದಾರರಾದ ಸುನಂದಾ ಅವರ ಮಗಳು ಪೂಜಾ ಅವರನ್ನು ನಟಿಯಾಗಿ ಆಯ್ಕೆ ಮಾಡಿದ್ದರು. ಈ ವೇಳೆ ಪೂಜಾ ಅವರು ತಾಯಿ ಸುನಂದಾ ಅವರನ್ನು ನಾಗರಬಾವಿ ಪಾಪರೆಡ್ಡಿಪಾಳ್ಯಕ್ಕೆ ಕರೆದೊಯ್ದು ನಿರ್ಮಾಪಕ ಶಿವರಾಮ್ ಅವರನ್ನು ಭೇಟಿ ಮಾಡಿಸಿ ಪರಿಚಯಿಸಿದ್ದಾರೆ. ಈ ವೇಳೆ ಶಿವರಾಮ್ ಅವರು ಸಿನಿಮಾ ನಿರ್ಮಾಣಕ್ಕೆ ಆರ್ಥಿಕ ಸಮಸ್ಯೆಯಾಗಿದೆ ಎಂದು ಸುನಂದಾ ಅವರ ಬಳಿ ₹5 ಲಕ್ಷ ಕೈ ಸಾಲ ಪಡೆದಿದ್ದಾರೆ. ಕೆಲವೇ ದಿನಗಳಲ್ಲಿ ಆ ಹಣವನ್ನು ವಾಪಾಸ್ ನೀಡಿದ್ದಾರೆ.
ಚಿನ್ನಾಭರಣ ಪಡೆದು ವಂಚನೆ:
ಇದಾದ ಕೆಲ ಸಮಯದ ಬಳಿ ಶಿವರಾಮ್ ಮತ್ತೆ ಸುನಂದಾ ಅವರ ಬಳಿ ಹಣ ಸಾಲ ಕೇಳಿದ್ದಾರೆ. ಈ ವೇಳೆ ಸುನಂದಾ ಹಣ ಇಲ್ಲ ಎಂದಿದ್ದಾರೆ. ಬಳಿಕ ತಮ್ಮ ಬಳಿಯಿದ್ದ 575 ಗ್ರಾಂ ಚಿನ್ನಾಭರಣಗಳನ್ನು ಶಿವರಾಮ್‌ಗೆ ನೀಡಿದ್ದಾರೆ. ಈ ಚಿನ್ನಾಭರಣ ಪಡೆಯುವಾಗ ಭದ್ರತೆಗಾಗಿ ಶಿವರಾಮ್ ಎರಡು ಚೆಕ್‌ಗಳನ್ನು ನೀಡಿದ್ದಾರೆ. ಬಳಿಕ ಚೆಕ್ ಅವಧಿ ಮುಗಿದರೂ ಶಿವರಾಮ್ ಚಿನ್ನಾಭರಣ ವಾಪಾಸ್ ನೀಡಿಲ್ಲ. ಹೀಗಾಗಿ ನಿರ್ಮಾಪಕ ಶಿವರಾಮ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುನಂದಾ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.