ಸಾರಾಂಶ
ಗೋವಾದ ಹೋಟೆಲ್‌ವೊಂದರಲ್ಲಿ ತನ್ನ ಮಗುವನ್ನೇ ಕೊಂದು ಸೂಟ್ ಕೇಸ್ ನಲ್ಲಿ ಶವವನ್ನು ಬೆಂಗಳೂರು ಕಡೆ ಕೊಂಡೊಯ್ಯುತ್ತಿದ್ದ ಸ್ಟಾರ್ಟ್ ಆಫ್ ಫೌಂಡರ್‌ನ ಸಿಇಓ ಸುಚನಾ ಸೇಠ್ ರವರನ್ನು ತಾಲೂಕಿನ ಐಮಂಗಲ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಹಿರಿಯೂರು
ಗೋವಾದ ಹೋಟೆಲ್‌ವೊಂದರಲ್ಲಿ ತನ್ನ ಮಗುವನ್ನೇ ಕೊಂದು ಸೂಟ್ ಕೇಸ್ ನಲ್ಲಿ ಶವವನ್ನು ಬೆಂಗಳೂರು ಕಡೆ ಕೊಂಡೊಯ್ಯುತ್ತಿದ್ದ ಸ್ಟಾರ್ಟ್ ಆಫ್ ಫೌಂಡರ್‌ನ ಸಿಇಓ ಸುಚನಾ ಸೇಠ್ ರವರನ್ನು ತಾಲೂಕಿನ ಐಮಂಗಲ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಮೃತ ಮಗುವನ್ನು ಚಿನ್ಮಯ್ ರಾಮನ್ ಸೇಠ್ (4) ಎಂದು ಗುರುತಿಸಲಾಗಿದೆ. ಸುಚನಾ ಸೇಠ್ ರವರು ಗೋವಾದ ಹೋಟೆಲ್‌ವೊಂದರಲ್ಲಿ ಮಗುವಿನೊಂದಿಗೆ ತಂಗಿದ್ದು, ತನ್ನ 4 ವರ್ಷದ ಗಂಡು ಮಗುವನ್ನು ಸುಚನಾ ಸೇಠ್ ಕತ್ತು ಹಿಸುಕಿ ಹತ್ಯೆ ಮಾಡಿರುವ ಶಂಕೆ ಇದೆ.
ಬಳಿಕ ಮಗುವಿನ ಶವವನ್ನು ಸೂಟ್ ಕೇಸ್‌ನಲ್ಲಿತೆಗೆದುಕೊಂಡು ಹೊರ ಹೋಗುವಾಗ ಹೋಟೆಲ್ ಸಿಬ್ಬಂದಿಗೆ ಅನುಮಾನ ಬಂದು ಮಗುವಿನ ಬಗ್ಗೆ ವಿಚಾರಿಸಿದಾಗ ಸಂಬಂಧಿಕರ ಬಳಿ ಕಳಿಸಿದ್ದೇನೆ ಎಂಬ ಜಾರಿಕೆಯ ಉತ್ತರ ನೀಡಿ ಬಾಡಿಗೆ ಟ್ಯಾಕ್ಸಿ ಮಾಡಿಕೊಂಡು ಮಗುವಿದ್ದ ಸೂಟ್ ಕೇಸ್ ಅನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಬೆಂಗಳೂರಿನತ್ತ ಹೊರಟಿದ್ದಾರೆ.
ಹೋಟೆಲ್ ಸಿಬ್ಬಂದಿಗಳಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೋವಾ ಪೊಲೀಸರು ಚಿತ್ರದುರ್ಗ ಜಿಲ್ಲೆಯ ಪೊಲೀಸರಿಗೆ ಮಾಹಿತಿ ನೀಡಿ ಬಾಡಿಗೆ ಟ್ಯಾಕ್ಸಿಯ ಚಾಲಕನನ್ನು ಸಂಪರ್ಕಿಸಿ ಹೆದ್ದಾರಿ ಪಕ್ಕದ ಐಮಂಗಲ ಠಾಣೆಯ ಬಳಿ ಕಾರು ನಿಲ್ಲಿಸಲು ಸೂಚಿಸಿದ್ದಾರೆ.
ಅದರಂತೆ ಚಾಲಕ ಆರೋಪಿಯನ್ನು ಐಮಂಗಲ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾನೆ. ಆಕೆಯನ್ನು ಬಂಧಿಸಿ ಕಾರ್ ನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್ ಅನ್ನು ಪರಿಶೀಲಿಸಿದಾಗ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಶವ ಮಾರ್ಚರಿಗೆ ಶಿಫ್ಟ್ ಮಾಡಿ ಆರೋಪಿ ಸುಚನಾರನ್ನು ಮುಂದಿನ ತನಿಖೆಗಾಗಿ ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸುಚನಾರ ಪತಿ ವೆಂಕಟರಾಮನ್ ಅಬ್ರಾಡ್‌ನಲ್ಲಿದ್ದಾರೆ ಎಂಬ ಮಾಹಿತಿಯಿದ್ದು, ಪತಿ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದೀಗ ಗೋವಾ ಪೊಲೀಸರು ವೆಂಕಟರಾಮನ್ ರವರಿಗೆ ವಿಷಯ ತಿಳಿಸಿದ್ದು, ಅವರು ಮಂಗಳವಾರ ರಾತ್ರಿಯ ಹೊತ್ತಿಗೆ ಬರುವ ಸೂಚನೆ ಇದೆ. ಕೌಟುoಬಿಕ ಕಲಹಕ್ಕೆ ಏನೂ ಅರಿಯದ ಮುಗ್ಧ ಕಂದ ಬಲಿಯಾಗಿದೆ.
ಪತಿಗೆ ಮಗುವು ಸಿಗಬಾರದು ಎಂಬ ಉದ್ದೇಶಕ್ಕೆ ಈ ಹತ್ಯೆ ನಡೆಯಿತಾ? ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಶವಾಗಾರದ ಕೋಣೆಯಲ್ಲಿ ಯಾರದೋ ತಪ್ಪಿಗೆ ಜೀವ ಕಳೆದುಕೊಂಡ ನಾಲ್ಕು ವರ್ಷದ ಮಗು ನೋಡಲು ಬಂದವರ ಕಣ್ಣನ್ನು ಒದ್ದೆಯಾಗಿಸುತ್ತಿತ್ತು.
ಅಪ್ಪನ ಜೊತೆ ಮಗನ ಮಾತು ಇಷ್ಟವಿರಲಿಲ್ಲ!
ಸ್ವಂತ ಮಗನನ್ನೇ ಕೊಂದ ಸೂಚನಾ ಬೆಂಗಳೂರಿನ ಖಾಸಗಿ ಕಂಪನಿಯ ಫೌಂಡರ್ ಮತ್ತು ಸಿಇಓ ಎನ್ನಲಾಗಿದೆ. ಕೊಲ್ಕತ್ತಾ ಮೂಲದ ಸುಚನಾ ಸೇಠ್ 2008 ರಲ್ಲಿ ಬೆಂಗಳೂರಿಗೆ ಬಂದಿದ್ದಳು. 2010 ರಲ್ಲಿ ತಮಿಳುನಾಡಿನ ವೆಂಕಟರಮಣ ಜತೆ ಪರಿಚಯವಾಗುತ್ತದೆ.
ಆನಂತರ ಸುಚನಾ ಮತ್ತು ವೆಂಕಟರಮಣ ವಿವಾಹವಾಗಿದ್ದರು. 2019 ರಲ್ಲಿ ಸುಚನಾ ಮತ್ತು ವೆಂಕಟರಮಣ ದಂಪತಿಗೆ ಚಿನ್ಮಯ್ ಜನಿಸಿದ್ದನು. 2019 ರ ನಂತರ ದಾಂಪತ್ಯದಲ್ಲಿ ಬಿರುಕು ಮೂಡಿ ಪರಸ್ಪರ ವಿಚ್ಛೇಧನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರತಿ ರವಿವಾರ ಮಗುವಿಗೆ ತಂದೆ ಜತೆ ಮಾತನಾಡಲು ಕೋರ್ಟ್ ಅವಕಾಶ ಮಾಡಿಕೊಟ್ಟಿತ್ತು. ತಂದೆ ಜತೆ ಚಿನ್ಮಯ್ ಮಾತನಾ ಡುವುದು ಸೂಚನಾಗೆ ಇಷ್ಟವಿರಲಿಲ್ಲ ಎನ್ನಲಾಗಿದ್ದು ಗೋವಾಗೆ ಮಗನನ್ನು ಕರೆದೊಯ್ದು ಹತ್ಯೆ ಮಾಡಲಾಗಿದೆ.
ಮಗನ ಹತ್ಯೆ ಬಳಿಕ ತಾನೂ ಸಹ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಆತ್ಮಹತ್ಯೆ ನಿರ್ಧಾರ ಕೈಬಿಟ್ಟು ಬೆಂಗಳೂರಿಗೆ ತೆರಳುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿನ್ಮಯ್ ಶವಪರೀಕ್ಷೆ ವರದಿ: ಬೆಂಗಳೂರಿನ ಖಾಸಗಿ ಕಂಪನಿ ಫೌಂಡರ್ ಮತ್ತು ಸಿಇಓ ಸುಚನಾ ಮಗ ಚಿನ್ಮಯ್‌ನ ಶವಪರೀಕ್ಷೆ ಹಿರಿಯೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನಡೆಯಿತು.
ಡಾ.ರಂಗೇಗೌಡ, ವೈದ್ಯಾಧಿಕಾರಿ ಡಾ.ಕುಮಾರ್ ನಾಯ್ಕ್ ಶವಪರೀಕ್ಷೆ ನಡೆಸಿದ್ದು, ನಂತರ ಹೇಳಿಕೆ ನೀಡಿದ ವೈದ್ಯಾಧಿಕಾರಿ ಡಾ.ಕುಮಾರ್ ನಾಯ್ಕ್ ಸುಮಾರು 36 ತಾಸು ಹಿಂದೆಯೇ ಮಗುವಿನ ಹತ್ಯೆ ನಡೆದಿದೆ.
ಕತ್ತು ಹಿಸುಕಿ ಮಗುವಿನ ಹತ್ಯೆ ಮಾಡಲಾಗಿದೆ. ತಲೆದಿಂಬು ಅಥವಾ ಬೇರೆ ವಸ್ತು ಬಳಸಿ ಉಸಿರುಗಟ್ಟಿಸಿರಬಹುದು. ಕೈ ಬಳಸಿ ಕತ್ತು ಹಿಸುಕಿ ಮಗುವಿನ ಹತ್ಯೆ ಮಾಡಲಾಗಿಲ್ಲ. ಉಸಿರುಗಟ್ಟಿಸಿದ ಕಾರಣ ಮುಖ ಮತ್ತು ಎದೆಭಾಗ ಊದಿಕೊಂಡಿದ್ದು, ಮಗುವಿನ ಮೂಗಿನಿಂದ ರಕ್ತಸ್ರಾವ ಆಗಿದೆ ಎಂದಿದ್ದಾರೆ.