ರಸ್ತೇಲಿ ಕಾರಿನ ಮಿರರ್‌ ಒಡೆದುದಂಪತಿ ಜತೆಗೆ ಪುಂಡರ ಕಿರಿಕ್‌

| Published : Mar 12 2025, 01:45 AM IST

ಸಾರಾಂಶ

ನಗರದಲ್ಲಿ ಪೊಲೀಸರು ಪುಂಡರ ಹಾವಳಿ ನಿಯಂತ್ರಿಸಲು ಎಷ್ಟೇ ಬಿಗಿ ಕ್ರಮ ಕೈಗೊಂಡರೂ ರೋಡ್‌ ರೇಜ್‌ (ರಸ್ತೆ ಕೋಪ) ಘಟನೆಗಳು ಮುಂದುವರೆದಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಪೊಲೀಸರು ಪುಂಡರ ಹಾವಳಿ ನಿಯಂತ್ರಿಸಲು ಎಷ್ಟೇ ಬಿಗಿ ಕ್ರಮ ಕೈಗೊಂಡರೂ ರೋಡ್‌ ರೇಜ್‌ (ರಸ್ತೆ ಕೋಪ) ಘಟನೆಗಳು ಮುಂದುವರೆದಿವೆ. ಇತ್ತೀಚೆಗೆ ಇಬ್ಬರು ಪುಂಡರು ರಸ್ತೆಯಲ್ಲಿ ಕಾರನ್ನು ತಡೆದು ದಂಪತಿ ಜತೆಗೆ ಕಿರಿಕ್‌ ತೆಗೆದು ಕಾರಿನ ಮಿರರ್‌ಗೆ ಗುದ್ದಿ ಹಾನಿಗೊಳಿಸಿ ಬೆದರಿಕೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಾ.9ರಂದು ರಾತ್ರಿ ಸುಮಾರು 9 ಗಂಟೆಗೆ ಟಿ.ಸಿ.ಪಾಳ್ಯ ಸಿಗ್ನಲ್‌ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಯುವಕರ ಪುಂಡಾಟದ ವಿಡಿಯೋವನ್ನು ನಿರಂಜನ್‌ ಎಂಬುವವರು ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಗರ ಪೊಲೀಸರಿಗೂ ಈ ವಿಡಿಯೋ ಟ್ಯಾಗ್‌ ಮಾಡಿದ್ದಾರೆ. ಇಂತಹ ಗೂಂಡಾವರ್ತನೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಏನಿದು ಘಟನೆ?

ನಿರಂಜನ್‌ ಮತ್ತು ಅವರ ಪತ್ನಿ ತಮ್ಮ 10 ತಿಂಗಳ ಮಗುವಿನೊಂದಿಗೆ ಕಾರಿನಲ್ಲಿ ಬರುತ್ತಿದ್ದರು. ಟಿ.ಸಿ.ಪಾಳ್ಯ ಸಿಗ್ನಲ್‌ನಲ್ಲಿ ಬರುವಾಗ ರೆಡ್‌ ಸಿಗ್ನಲ್‌ ಬಿದ್ದ ಪರಿಣಾಮ ಕಾರನ್ನು ನಿರಂಜನ್‌ ನಿಲ್ಲಿಸಿದ್ದಾರೆ. ಈ ವೇಳೆ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು, ಸಿಗ್ನಲ್‌ ಕ್ರಾಸ್‌ ಮಾಡುವಂತೆ ಹೇಳಿದ್ದಾರೆ. ರೆಡ್‌ ಸಿಗ್ನಲ್‌ ಇದುದ್ದರಿಂದ ನಿರಂಜನ್‌ ಮುಂದೆ ಹೋಗಲು ನಿರಾಕರಿಸಿದ್ದಾರೆ. ಅಷ್ಟಕ್ಕೆ ರೊಚ್ಚಿಗೆದ್ದ ಆ ಇಬ್ಬರು ಪುಂಡರು ಏಕಾಏಕಿ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನ ಮುಂಭಾಗದ ಮಿರರ್‌ಗೆ ಕೈನಿಂದ ಗುದ್ದಿ ಮುರಿದಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ದಂಪತಿಗೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

ಈ ಘಟನೆಯ ವಿಡಿಯೋವನ್ನು ಕಾರಿನೊಳಗೆ ಮೊಬೈಲ್‌ನಿಂದ ಸೆರೆ ಹಿಡಿದ್ದು, ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿ ಘಟನೆ ಬಗ್ಗೆ ಬರೆದುಕೊಂಡಿದ್ದಾರೆ. ಪುಂಡರು ತಮ್ಮ ಕಾರಿನ ಮೇಲೆ ಹೇಗೆ ದಾಳಿ ಮಾಡಿದರು. ಇದರಿಂದ ತಾವು ಅನುಭವಿಸಿದ ಭಯದ ಬಗ್ಗೆ ವಿವರಿಸಿದ್ದಾರೆ.