ಸಾರಾಂಶ
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಗಮನ ಬೇರೆಡೆ ಸೆಳೆದು 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ರಾಮನಗರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಗಮನ ಬೇರೆಡೆ ಸೆಳೆದು 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಕೈಲಾಂಚ ಗ್ರಾಮದ ಸರ್ವಮಂಗಳ ಚಿನ್ನಾಭರಣ ಕಳೆದುಕೊಂಡವರು. ಸರ್ವ ಮಂಗಳ ಅವರು ಕಾಸಿನ ಸರ, ಬಳೆ, ಒಡವೆಗಳನ್ನು ರಾಮನಗರದ ಕೆನರಾ ಬ್ಯಾಂಕ್‌ನಲ್ಲಿ ಅಡವಿಡಲು ಕೈಲಾಂಚ ಗ್ರಾಮದಲ್ಲಿ ಸಾರಿಗೆ ಬಸ್ ಹತ್ತಿದ್ದಾರೆ. ಅಚ್ಚಲು ಗ್ರಾಮದ ಬಳಿ ಇದೇ ಬಸ್ಸಿಗೆ ಮೂವರು ಹೆಂಗಸರು ಪ್ರಯಾಣಿಕರ ಸೋಗಿನಲ್ಲಿ ಹತ್ತಿದ್ದಾರೆ. ಇವರಲ್ಲಿ ಓರ್ವ ಮಹಿಳೆ ಮಗುವನ್ನು ಹಿಡಿದುಕೊಳ್ಳುವಂತೆ ಸರ್ವಮಂಗಳ ಅವರಿಗೆ ಕೊಟ್ಟು, ಅವರ ಬಳಿ ಮಾತನಾಡಿ ಗಮನ ಬೇರೆಡೆಗೆ ಸೆಳೆದಿದ್ದಾಳೆ.ಉಳಿದಿಬ್ಬರು ಕಳ್ಳಿಯರು ಬ್ಯಾಗಿನಲ್ಲಿದ್ದ ಚಿನ್ನಾಭರಣ ಲಪಟಾಯಿಸಿ, ರಾಮನಗರದ ಕನಕಪುರ ಸರ್ಕಲ್ ಬಳಿ ಮೂವರು ಹೆಂಗಸರು ಬಸ್‌ನಿಂದ ಇಳಿದು ಹೋಗಿದ್ದಾರೆ. ಬಳಿಕ ಸರ್ವ ಮಂಗಳ ರಾಮನಗರ ಬಸ್ ನಿಲ್ದಾಣದಲ್ಲಿ ಇಳಿದು ಕೆನರಾ ಬ್ಯಾಂಕ್‌ಗೆ ತೆರಳಿದ್ದು, ಬ್ಯಾಗಿನಲ್ಲಿದ್ದ ಚಿನ್ನಾಭರಣ ಕಳುವಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಕನಕಪುರ ಸರ್ಕಲ್‌ಗೆ ತೆರಳಿ ಸ್ಥಳದಲ್ಲಿನ ಅಂಗಡಿಯೊಂದರ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಹೆಂಗಸರು ಚಿನ್ನಾಭರಣ ತೆಗೆದುಕಂಡು ಹೋಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸರ್ವಮಂಗಳ ಅವರು ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.