ನಿರ್ಮಾಪಕಿಯಿಂದ ಹಣ ಸುಲಿಯಲು ಕಿಡ್ನಾಪ್‌ ಕಥೆ ಕಟ್ಟಿದ ಕಾರು ಚಾಲಕ!

| Published : Feb 17 2024, 01:19 AM IST / Updated: Feb 17 2024, 02:30 PM IST

Bengaluru crime
ನಿರ್ಮಾಪಕಿಯಿಂದ ಹಣ ಸುಲಿಯಲು ಕಿಡ್ನಾಪ್‌ ಕಥೆ ಕಟ್ಟಿದ ಕಾರು ಚಾಲಕ!
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕ್‌ನಲ್ಲಿ ನಿರ್ಮಾಪಕಿ 1 ಕೋಟಿ ಸಾಲ ಮಾಡಿದ ವಿಚಾರ ತಿಳಿದ್ದ ಆಕೆಯ ಕಾರಿನ ಚಾಲಕನ ಕಿಡ್ನಾಪ್‌ ನಾಟಕ ಆಡಿ ಸಿಕ್ಕಬಿದ್ದಿದ್ದಾನೆ. ಆತನೊಂದಿಗೆ ಸಹಕರಿಸಿದ ಐವರನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾವು ಕೆಲಸ ಮಾಡುತ್ತಿದ್ದ ಧಾರಾವಾಹಿ ನಿರ್ಮಾಪಕಿ ಬಳಿ ₹1 ಕೋಟಿ ಸುಲಿಗೆ ಮಾಡಲು ಅಪಹರಣ ನಾಟಕ ಸೃಷ್ಟಿಸಿದ್ದ ಅವರ ಕಾರು ಚಾಲಕ ಸೇರಿದಂತೆ ಏಳು ಮಂದಿಯನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲದ ಶ್ರೀನಿವಾಸ್‌, ಕುರುಬರಹಳ್ಳಿಯ ಹೇಮಂತ್ ಕುಮಾರ್‌, ಮೈಸೂರಿನ ತೇಜಸ್‌, ಮೋಹನ್‌, ಕಿರಣ್‌, ಹೆಗ್ಗನಹಳ್ಳಿ ಕಿರಣ್‌ ಹಾಗೂ ಕುಲದೀಪ್ ಸಿಂಗ್‌ ಬಂಧಿತರಾಗಿದ್ದು, ಆರೋಪಿಗಳಿಂದ ಕಾರು ಜಪ್ತಿ ಮಾಡಲಾಗಿದೆ. 

ಇತ್ತೀಚೆಗೆ ಧಾರವಾಹಿ ನಿರ್ಮಾಪಕಿ ಎಸ್‌.ಲಕ್ಷ್ಮಿ ಅ‍ವರ ಕೆಲಸಗಾರರಾದ ನಾಗೇಶ್ ಹಾಗೂ ಹೇಮಂತ್ ಅಪಹರಣ ನಾಟಕ ಹೆಣೆದು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾವೇ ಹೋಗಿ ಅಪಹರಣ ನಾಟಕ: ಚಲನಚಿತ್ರ ಹಾಗೂ ಧಾರವಾಹಿಗಳ ನಿರ್ಮಾಣದ ‘ಶ್ರೀನಿಧಿ ಪ್ರೋಡಕ್ಷನ್ ಹೌಸ್‌’ ಹೆಸರಿನ ಸಂಸ್ಥೆಯೊಡೆತಿ ಲಕ್ಷ್ಮಿ ಅವರು, ತಮ್ಮ ಕುಟುಂಬದ ಜತೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನೆಲೆಸಿದ್ದಾರೆ. 

ಪ್ರಸುತ್ತ ಖಾಸಗಿ ಕನ್ನಡ ವಾಹಿನಿಯಲ್ಲಿ ಅವರ ನಿರ್ಮಾಣದ ಧಾರವಾಹಿಯೊಂದು ಪ್ರಸಾರವಾಗುತ್ತಿದೆ. ಈ ಸಂಸ್ಥೆಯಲ್ಲಿ ನಾಗೇಶ್ ವ್ಯವಸ್ಥಾಪಕನಾಗಿದ್ದರೆ ಹಾಗೂ ಹೇಮಂತ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. 

ಇತ್ತೀಚೆಗೆ ಬ್ಯಾಂಕ್‌ನಲ್ಲಿ ಲಕ್ಷ್ಮಿ ಅವರು ₹1 ಕೋಟಿ ಗೃಹ ಸಾಲ ಪಡೆದಿರುವ ಸಂಗತಿ ತಿಳಿದ ಕಾರು ಚಾಲಕ, ಆ ಹಣ ದೋಚಲು ತಮ್ಮ ಗೆಳೆಯರ ಜತೆ ಸೇರಿ ಅಪಹರಣ ಸಂಚು ರೂಪಿಸಿದ್ದ.

ಅಂತೆಯೇ ಫೆ.12ರಂದು ಬೆಳಗ್ಗೆ ಲಕ್ಷ್ಮಿ ಅವರ ಕಾರನ್ನು ವೈಯಕ್ತಿಕ ಕೆಲಸವಿದೆ ಎಂದು ಹೇಳಿ ತೆಗೆದುಕೊಂಡು ನಾಗೇಶ್ ಹಾಗೂ ಹೇಮಂತ್ ಬಂದಿದ್ದರು. 

ಬಳಿಕ ಅದೇ ದಿನ ರಾತ್ರಿ ಲಕ್ಷ್ಮಿ ಅವರಿಗೆ ಕರೆ ಮಾಡಿ ಮಾತನಾಡಿದ್ದ ಆರೋಪಿಗಳ ಮೊಬೈಲ್ ಮರುದಿನ ಮೊಬೈಲ್ ಸ್ವಿಚ್ಡ್‌ ಆಫ್ ಆಗಿದ್ದವು. ನಾಗೇಶ್‌ನನ್ನು ಹೇಮಂತ್‌ ತನ್ನೊಂದಿಗೆ ಕರೆದೊಯ್ದಿದ್ದ. ಆದರೆ ಆತನಿಗೆ ಅಪಹರಣದ ನಾಟಕ ಗೊತ್ತಿರಲಿಲ್ಲ.

ಫೆ.14ರಂದು ಲಕ್ಷ್ಮಿ ಅವರಿಗೆ ಕರೆ ಮಾಡಿದ ಆರೋಪಿಗಳು, ಅಳುತ್ತ ನನ್ನನ್ನು ಯಾರೋ ಅಪರಿಚಿತರು ಅಪಹರಿಸಿ ಕಾರಿನಲ್ಲಿ ಸುತ್ತಾಡಿಸುತ್ತಿದ್ದಾರೆ ಎಂದಿದ್ದರು. 

ಆಗ ಆತನಿಂದ ಅಪಹರಣಕಾರರೊಬ್ಬ ಮೊಬೈಲ್ ಕಿತ್ತುಕೊಂಡು, ‘ನಿಮ್ಮ ಹುಡುಗರು ಬೇಕೆಂದರೆ ₹1 ಕೋಟಿ ಕೊಡಬೇಕು. ಇಲ್ಲದೆ ಹೋದರೆ ಅವರನ್ನು ಜೀವಂತ ಬಿಡುವುದಿಲ್ಲ’ ಎಂದು ಬೆದರಿಸಿ ಕರೆ ಸ್ಥಗಿತಗೊಳಿಸಿದ್ದರು.

ಇದರಿಂದ ಆತಂಕಗೊಂಡ ಲಕ್ಷ್ಮಿ ಅವರು, ಕೂಡಲೇ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ತೆರಳಿ ದೂರು ನೀಡಿದರು. ತನಿಖೆಗಿಳಿದ ಪೊಲೀಸರು, ಲಕ್ಷ್ಮಿ ಅವರ ಮನೆ ಸುತ್ತಮುತ್ತ ಹಾಗೂ ಟೋಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ದೃಶ್ಯ ಪರಿಶೀಲಿಸಿದಾಗ ಕೃತ್ಯದಲ್ಲಿ ಅವರ ಕೆಲಸಗಾರನೇ ಪಾಲ್ಗೊಂಡಿರುವುದು ಖಚಿತವಾಗಿದೆ. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.