ಮನೆಗಳಲ್ಲಿ ಕದ್ದ ಚಿನ್ನಾಭರಣವನ್ನು ಸ್ನೇಹಿತ ಮತ್ತು ತನ್ನ ಗೆಳತಿಗೆ ನೀಡಿದ್ದ ಎಸ್ಕೇಪ್‌ ಕಾರ್ತಿಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಬೀಗ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನಕಪುರ ಮುಖ್ಯರಸ್ತೆಯ ಬಾಲಾಜಿ ಲೇಔಟ್‌ ನಿವಾಸಿ ರಘು ಅಲಿಯಾಸ್‌ ಪೆಪ್ಸಿ(26) ಮತ್ತು ಕೆ.ನಾರಾಯಣಪುರದ ಕಾವೇರಿ ನಗರ ನಿವಾಸಿ ಕಾರ್ತಿಕ್‌ ಅಲಿಯಾಸ್ ಎಸ್ಕೇಪ್‌ ಕಾರ್ತಿಕ್‌(36) ಬಂಧಿತರು. ಆರೋಪಿಗಳಿಂದ ₹31 ಲಕ್ಷ ಮೌಲ್ಯದ 470 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 3 ಕೆ.ಜಿ. ಬೆಳ್ಳಿ ಗಟ್ಟಿ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಕುಮಾರಸ್ವಾಮಿ ಲೇಔಟ್‌ನ ಫೈಜ್‌ ಮಸೀದಿ ಸಮೀಪದ ಮನೆಯೊಂದರ ಬೀಗ ಮುರಿದು ದುಷ್ಕರ್ಮಿಗಳು ಕಳ್ಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ಮಾಲೀಕನ ದೂರಿನ ಮೇರೆಗೆ ತನಿಖೆಗೆ ಇಳಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಕುಮಾರಸ್ವಾಮಿ ಲೇಔಟ್‌ನ 14ನೇ ಮುಖ್ಯರಸ್ತೆಯಲ್ಲಿ ಕಾರ್ತಿಕ್‌ನನ್ನು 20 ಗ್ರಾಂ ಚಿನ್ನದ ಸಮೇತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಸ್ನೇಹಿತ ರಘು ಜತೆ ಸೇರಿ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ರಘುನನ್ನು ವಶಕ್ಕೆ ಪಡೆಯಲಾಗಿದೆ.

ಕದ್ದ ಚಿನ್ನವನ್ನು ಸ್ನೇಹಿತ, ಪ್ರೇಯಸಿಗೆ ನೀಡಿದ್ದ!ಆರೋಪಿ ಕಾರ್ತಿಕ್‌ ಕದ್ದ ಚಿನ್ನಾಭರಣಗಳನ್ನು ಬೆಂಗಳೂರು ಮತ್ತು ಹೈದರಾಬಾದ್‌ನ ವಿವಿಧ ಜುವೆಲ್ಲರಿ ಅಂಗಡಿಗಳಲ್ಲಿ ಅಡಮಾನ ಇರಿಸಿರುವುದಾಗಿ ಹೇಳಿದ್ದಾನೆ. ಅಂತೆಯೇ ಕೆಲವು ಚಿನ್ನಾಭರಣಗಳನ್ನು ಸ್ನೇಹಿತ ಮತ್ತು ಪ್ರೇಯಸಿಗೆ ನೀಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಬನ್ನೇರುಘಟ್ಟದಲ್ಲಿ ನೆಲೆಸಿರುವ ಸ್ನೇಹಿತನಿಂದ 88 ಗ್ರಾಂ ಚಿನ್ನಾಭರಣ, ಕಾವೇರಿನಗರ ನಿವಾಸಿಯಾಗಿರುವ ಪ್ರೇಯಸಿಯಿಂದ 48 ಗ್ರಾಂ ಚಿನ್ನಾಭರಣ, ವಿವಿಧೆಡೆ ಅಡಮಾನವಿರಿಸಿದ್ದ 134 ಗ್ರಾಂ ಚಿನ್ನಾಭರಣ ಸೇರಿ ಒಟ್ಟು 290 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಆರೋಪಿ ಕಾರ್ತಿಕ್‌ ವೃತ್ತಿಪರ ಕಳ್ಳನಾಗಿದ್ದು, ಈತನ ವಿರುದ್ಧ ಈ ಹಿಂದೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಮನೆಗಳವು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ.

ಅಂತೆಯೇ ಆರೋಪಿ ರಘು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ 180 ಗ್ರಾಂ ಚಿನ್ನಾಭರಣ ಹಾಗೂ 3 ಕೆ.ಜಿ.ಬೆಳ್ಳಿ ಗಟ್ಟಿ ಜಪ್ತಿ ಮಾಡಲಾಗಿದೆ. ಈ ಇಬ್ಬರು ಆರೋಪಿಗಳ ಬಂಧನದಿಂದ ಕುಮಾರಸ್ವಾಮಿ ಲೇಔಟ್ ಮತ್ತು ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.