ಸಾರಾಂಶ
ಬೆಂಗಳೂರು : ರಸ್ತೆ ಬದಿ ನೆಟ್ ಕಟ್ಟಿ ವಾಲಿಬಾಲ್ ಆಡುತ್ತಿದ್ದ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಪರಸ್ಪರ ನಿಂದಿಸಿ ಹೊಡೆದಾಡಿಕೊಂಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ದೂರು-ಪ್ರತಿದೂರು ದಾಖಲಾಗಿದೆ.
ತಲಘಟ್ಟಪುರವ ಆವಲಹಳ್ಳಿಯಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ನೇತ್ರಾವತಿ ಎಂಬುವವರು ಯೋಗೇಶ್ ಮತ್ತು ಭಾಸ್ಕರ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಭಾಸ್ಕರ್ ಎಂಬುವರು ನೇತ್ರಾವತಿ ಮತ್ತು ಆಕೆಯ ಪುತ್ರ ಸಂಜಯ್ ಎಂಬುವವರ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ಈ ಸಂಬಂಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:
ದೂರುದಾರೆ ನೇತ್ರಾವತಿಯ ಪುತ್ರ ಸಂಜಯ್ ಹಾಗೂ ಪುತ್ರಿ ಸೇರಿ ಕೆಲವರು ಭಾನುವಾರ ಸಂಜೆ ರಸ್ತೆ ಬದಿ ನೆಟ್ ಕಟ್ಟಿಕೊಂಡು ವಾಲಿಬಾಲ್ ಆಡುತ್ತಿದ್ದರು. ರಸ್ತೆಗೆ ಚಾಚಿಕೊಂಡಂತೆ ನೆಟ್ ಕಟ್ಟಿದ್ದ ಪರಿಣಾಮ ಸ್ಥಳೀಯರ ಓಡಾಟಕ್ಕೆ ತೊಂದರೆ ಆಗುತ್ತಿತ್ತು. ಹೀಗಾಗಿ ಸ್ಥಳೀಯರಾದ ಬಾಲಾಜಿ, ಯೋಗಿ ಇದನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ಥಳೀಯ ನಿವಾಸಿಗಳು ಸಾಥ್ ನೀಡಿದ್ದಾರೆ. ಅಷ್ಟರಲ್ಲಿ ಸಂಜಯ್ ತಾಯಿ ನೇತ್ರಾವತಿ ಅಲ್ಲಿಗೆ ಬಂದಿದ್ದು, ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡೂ ಗುಂಪುಗಳು ಹೊಡೆದಾಡಿಕೊಂಡಿದ್ದಾರೆ. ಗಲಾಟೆ ವೇಳೆ ಕೆಲವರು ನೇತ್ರಾವತಿ ಮತ್ತು ಆಕೆಯ ಪುತ್ರಿಯ ತಲೆ ಕೂದಲು ಹಿಡಿದು ರಸ್ತೆಯಲ್ಲಿ ಎಳೆದಾಡಿದ್ದಾರೆ. ಬಳಿಕ ಸ್ಥಳೀಯರೇ ಎರಡೂ ಗುಂಪುಗಳ ನಡುವಿನ ಜಗಳ ಬಿಡಿಸಿ ಸಮಾಧಾನಪಡಿಸಿದ್ದಾರೆ.
ಈ ಘಟನೆ ಸಂಬಂಧ ದೂರು-ಪ್ರತಿದೂರು ದಾಖಲಾಗಿದೆ. ಎರಡೂ ಗುಂಪಿನ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿ, ಮುಂದೆ ಹೀಗೆ ಜಗಳವಾಡದಂತೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.