ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಕಳವು : ಚಿನ್ನ ಕದ್ದು ಚರಂಡಿಯಲ್ಲಿ ಬಚ್ಚಿಡುತ್ತಿದ್ದ ರೌಡಿ

| Published : Aug 17 2024, 01:46 AM IST / Updated: Aug 17 2024, 04:56 AM IST

gold rate
ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಕಳವು : ಚಿನ್ನ ಕದ್ದು ಚರಂಡಿಯಲ್ಲಿ ಬಚ್ಚಿಡುತ್ತಿದ್ದ ರೌಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ ರೌಡಿ ಶೀಟರ್‌ ಸೇರಿ ಇಬ್ಬರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ ರೌಡಿ ಶೀಟರ್‌ ಸೇರಿ ಇಬ್ಬರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಪ್ತಗಿರಿ ಲೇಔಟ್‌ ನಿವಾಸಿ ನರಸಿಂಹ ರೆಡ್ಡಿ(36)ಮತ್ತು ತಮಿಳುನಾಡಿನ ಹೊಸೂರು ನಿವಾಸಿ ವಿನು ಚಕ್ರವರ್ತಿ(36) ಬಂಧಿತರು. ಆರೋಪಿಗಳಿಂದ ₹81.25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನಶಂಕರಿ 3ನೇ ಹಂತದ ನಿವಾಸಿಯೊಬ್ಬರು ಮೇ 10ರಂದು ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ಬೀಗ ಮುರಿದು ಮನೆ ಪ್ರವೇಶಿಸಿ ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್‌ ಯು.ಸತೀಶ್‌ ಕುಮಾರ್‌ ನೇತೃತ್ವದಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ರೌಡಿ ವಿರುದ್ಧ 49 ಪ್ರಕರಣಗಳು ದಾಖಲು:

ಆರೋಪಿ ನರಸಿಂಹ ರೆಡ್ಡಿ ಗಿರಿನಗರ ಠಾಣೆ ರೌಡಿ ಶೀಟರ್‌ ಆಗಿದ್ದಾನೆ. ಹಲವು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 49 ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳೆದ ಮೇ ತಿಂಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ನರಸಿಂಹ ರೆಡ್ಡಿ ನಂತರವೂ ತನ್ನ ಕಳ್ಳತನ ಚಾಳಿ ಮುಂದುವರೆಸಿದ್ದ. ಮತ್ತೊಬ್ಬ ಆರೋಪಿ ವಿನು ಚಕ್ರವರ್ತಿ ಅಪರಾಧ ಹಿನ್ನೆಲೆಯುಳ್ಳವನಾಗಿದ್ದಾನೆ. ಆರೋಪಿ ನರಸಿಂಹ ರೆಡ್ಡಿಯ ಸ್ನೇಹಿತನಾಗಿರುವ ಈತ ಕದ್ದ ಮಾಲುಗಳನ್ನು ಸ್ವೀಕರಿಸಿ ವಿಲೇವಾರಿ ಮಾಡುತ್ತಿದ್ದ. ಈತನ ವಿರುದ್ಧವೂ ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಆರು ಅಪರಾಧ ಪ್ರಕರಣಗಳು ದಾಖಲಾಗಿವೆ.

ಚರಂಡಿ, ಬಂಡೆಗಳ ಸಂದಿಯಲ್ಲಿ ಬಚ್ಚಿಡುತ್ತಿದ್ದ!

ಆರೋಪಿ ನರಸಿಂಹ ರೆಡ್ಡಿ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಚಿನ್ನಾಭರಣಗಳು, ಬೆಳ್ಳಿ ವಸ್ತುಗಳು, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ. ಕದ್ದ ಮಾಲುಗಳನ್ನು ಮನೆ ಸಮೀಪದ ಚರಂಡಿಗಳು, ಬಂಡೆಗಳ ಬಳಿ ಬಚ್ಚಿಡುತ್ತಿದ್ದ. ಅಗತ್ಯ ಬಿದ್ದಾಗ ತೆಗೆದುಕೊಂಡು ಸ್ನೇಹಿತ ವಿನು ಚಕ್ರವರ್ತಿ ಸೇರಿದಂತೆ ಕೆಲ ಪರಿಚಿತರ ಮುಖಾಂತರ ವಿಲೇವಾರಿ ಮಾಡುತ್ತಿದ್ದ. ಆರೋಪಿಯ ಬಂಧನದಿಂದ ಗಿರಿನಗರ, ಬಸವನಗುಡಿ ಹಾಗೂ ಜಯನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಅಡಮಾನ

ಆರೋಪಿ ನರಸಿಂಹ ರೆಡ್ಡಿ ವಿಚಾರಣೆ ವೇಳೆ ಕದ್ದ ಮಾಲುಗಳ ಪೈಕಿ ಕೆಲವನ್ನು ಹೊಸೂರು ಮೂಲದ ಸ್ನೇಹಿತ ವಿನುಚಕ್ರವರ್ತಿಗೆ ನೀಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಈ ಮಾಹಿತಿ ಮೇರೆಗೆ ಗಿರಿನಗರ ಪೊಲೀಸರು, ಬಾಡಿವಾರೆಂಟ್‌ ಮೇಲೆ ಈರೋಡ್‌ ಜೈಲಿನಿಂದ ವಿನುಚಕ್ರವರ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕುಣಿಗಲ್‌-ಹಾಸನ ಮುಖ್ಯರಸ್ತೆಯ ಆಗ್ರೋ ಪ್ರೈವೇಟ್‌ ಲಿಮಿಟೆಡ್‌ನ ಹಿಂಭಾಗದ ಕಲ್ಲು ಬಂಡೆ ಬಳಿ ಬಚ್ಚಿಟ್ಟಿದ್ದ ಚಿನ್ನಾಭರಣ, ತಮಿಳುನಾಡಿನ ಕೃಷ್ಣಗಿರಿ ಹಾಗೂ ಸೂಳಗೇರಿಯ ಮುತ್ತೂಟ್‌ ಫೈನಾನ್ಸ್‌ನಲ್ಲಿ ಅಡಮಾನವಿರಿಸಿದ್ದ ಚಿನ್ನಾಭರಣಗಳು, ಕೃತ್ಯಕ್ಕೆ ಬಳಸುತ್ತಿದ್ದ ಎರಡು ಕಾರುಗಳನ್ನು ಕೆಂಗೇರಿ ಮತ್ತು ಹೊಸಕೆರೆಹಳ್ಳಿಯಲ್ಲಿ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.