ಸಾರಾಂಶ
ಮಳವಳ್ಳಿ : ಮೆಡಿಕಲ್ ಸ್ಟೋರ್ ಹಾಗೂ ಐಸ್ ಕ್ರೀಮ್ ಮಿಲ್ಕ್ ಪಾರ್ಲರ್ ಅಂಗಡಿಗಳ ಬೀಗ ಮುರಿದು ಮೂವರು ಕಳ್ಳರು ಹಣ, ಮೊವೈಲ್ ಹಾಗೂ ಇತರೆ ವಸ್ತುಗಳನ್ನು ಕಳ್ಳರ ಗುಂಪು ದೋಚಿ ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೆಎಸ್‌ಆರ್‌ಟಿಸಿ ಮುಂಭಾಗದ ಮಧು ಅವರಿಗೆ ಸೇರಿದ ಶ್ರೀಬಸವೇಶ್ವರ ಮೆಡಿಕಲ್‌ಸ್ಟೋರ್ ಹಾಗೂ ಮಳವಳ್ಳಿ-ಮೈಸೂರು ರಸ್ತೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಮುಂಭಾಗವಿರುವ ವಡ್ಡರಹಳ್ಳಿ ಮಹೇಶ್ ಅವರಿಗೆ ಸೇರಿದ ಮೀಲ್ಕ್ ಪಾರ್ಲರ್ ಹಾಗೂ ಐಸ್ ಕ್ರೀಮ್ ಅಂಗಡಿಗಳ ಬೀಗ ಮುರಿದಿರುವ ಕಳ್ಳರು ಮೆಡಿಕಲ್ ಸ್ಟೋರ್‌ನಲ್ಲಿ 25 ಸಾವಿರ ನಗದು, 1 ಮೊಬೈಲ್, ಐಸ್‌ಕ್ರೀಮ್ ಅಂಗಡಿಯಲ್ಲಿ 2 ಸಾವಿರ ನಗದು ಜೊತೆಗೆ ಚಿಲ್ಲರೇಕಾಸು, ಹಾಗೂ ಮಿಲ್ಕ್ ಪಾರ್ಲರ್‌ನಲ್ಲಿ 12 ಸಾವಿರ ನಗದನ್ನು ಕದ್ದು ಹೋಗಿದ್ದಾರೆ ಎನ್ನಲಾಗಿದೆ.
ಸಿಸಿಟಿವಿಯಲ್ಲಿ ಸೆರೆ:
ಬುಧವಾರ ರಾತ್ರಿ 11.56ರಲ್ಲಿ ಕಾರೊಂದರಲ್ಲಿ ಬಂದ ಮೂರು ಮಂದಿ ಕಳ್ಳರು ಬಸವೇಶ್ವರ ಮೆಡಿಕಲ್‌ಸ್ಟೋರ್ ಸೈಡ್ ಬಾಗಿಲಿನ ಬೀಗ ಮುರಿದು ಒಳ್ಳನುಗ್ಗಿ ಅಂಗಡಿಯಲ್ಲಿದ್ದ ಹಣವನ್ನು ದೋಚುತ್ತಿರುವುದು, ಒಬ್ಬ ಕಳ್ಳ ಕಾರಿನಲ್ಲಿಯೇ ಕುಳಿತಿರುವುದು ಮತ್ತೊಬ್ಬ ಕಳ್ಳ ರಸ್ತೆಯಲ್ಲಿ ನಿಂತು ಯಾರಾದರೂ ಬರುತ್ತಾರೆ ಎಂದು ನೋಡುತ್ತಿರುವುದು ಹಾಗೂ ಪಾರ್ಲರ್ ಬಳಿ ಕಳ್ಳತನ ಮಾಡುತ್ತಿದ್ದಾಗ ವೇಳೆ ಗಸ್ತುನಲ್ಲಿದ್ದ ಪೊಲೀಸರು ಬರುತ್ತಿದ್ದಂತೆ ಸ್ಥಳದಿಂದ ಪರಾರಿಯಾದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಪಟ್ಟಣದ ಹೃದಯಭಾಗದಲ್ಲಿ ಕಳ್ಳತನ ನಡೆದಿರುವುದಕ್ಕೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಗುರುವಾರ ಬೆಳಗ್ಗೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದು. ಈ ಸಂಬಂಧ ಪುರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಿಡಿಗೇಡಿಗಳಿಂದ ಬೆಂಕಿ; ಎಲೆಕ್ಟ್ರಾನಿಕ್ ವಸ್ತುಗಳು ನಾಶ
ಮಳವಳ್ಳಿ:ಜಮೀನಿನಲ್ಲಿರುವ ತೋಟದ ಮನೆಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದ ಪರಿಣಾಮ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗರಾಜುಗೆ ಸೇರಿದ ಸರ್ವೆ ನಂ.90ರ ತೋಟದ ಮನೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ 10 ಲಕ್ಷ ಮೌಲ್ಯದ ಬೆಲೆಬಾಳುವ 10 ಬಂಡಲ್ ಕೇಬಲ್ ವೈರ್, 2 ಸ್ಟಾರ್ಟರ್, ಟಿವಿ, ಆಂಪ್ಲಿ ಪ್ಲೇಯರ್, ಸ್ಪೀಕರ್, 4 ಟೀಕ್ ವುಡ್ ಸಿಂಗಲ್ ಕಾಟ್ ಮಂಚ, 10 ಪ್ಲಾಸ್ಟಿಕ್ ಛೇರ್, 2 ಪ್ಲಾಸ್ಟಿಕ್ ಮಂಚ, ವುಡನ್ ಡೋರ್, ವಿಂಡೊ ವುಡನ್ ಕಪ್ ಬೋರ್ಡ್ ಜಮೀನಿನ ದಾಖಲೆ ಪತ್ರ, ಪೈಬರ್ ಸೀಟ್ಸ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಸಂಬಂಧ ನಾಗರಾಜು ಸಂಬಂಧಿ ಎನ್.ಜಗದೀಶ್ ದೂರು ನೀಡಿದ್ದಾರೆ.ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.