ಸಾರಾಂಶ
ಬೆಂಗಳೂರು : ನಕಲಿ ಕೀ ಬಳಸಿ ಪರಿಚಿತರ ಮನೆಯಲ್ಲೇ ಕಳ್ಳತನ ಮಾಡಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ₹20 ಸಾವಿರ ಹುಂಡಿಗೆ ಹಾಕಿ ಹರಕೆ ತೀರಿಸಿದ್ದ ಮೂವರು ಆರೋಪಿಗಳನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗವೀಪುರಂ ಗುಟ್ಟಹಳ್ಳಿ ನಿವಾಸಿಗಳಾದ ಕಿರಣ್(30), ನಾರಾಯಣ(40) ಮತ್ತು ಆನಂದ್(30) ಬಂಧಿತರು. ಆರೋಪಿಗಳಿಂದ 3.75 ಲಕ್ಷ ರು. ನಗದು ಹಾಗೂ 72 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಮಾ.29ರಂದು ಸಮೀರಪುರ ಮುಖ್ಯರಸ್ತೆಯ ನಿವಾಸಿ ಉಮಾ ಎಂಬುವವರ ಮನೆಯಲ್ಲಿ ನಕಲಿ ಕೀ ಬಳಸಿ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
ದೂರುದಾರೆ ಉಮಾ ಅವರು ಚಾಮರಾಜಪೇಟೆಯ ಅಪ್ಪುರಾವ್ ರಸ್ತೆಯಲ್ಲಿ ಕೋಳಿ ಮೊಟ್ಟೆ ಅಂಗಡಿ ಇರಿಸಿಕೊಂಡಿದ್ದಾರೆ. ಈ ಅಂಗಡಿಯ ಪಕ್ಕದಲ್ಲಿ ಆರೋಪಿ ಕಿರಣ್ ಕಟಿಂಗ್ ಶಾಪ್ ಇರಿಸಿಕೊಂಡಿದ್ದಾನೆ. ಇನ್ನು ಆರೋಪಿ ನಾರಾಯಣ ಕಬಾಬ್ ವ್ಯಾಪಾರ ಮಾಡಿದರೆ, ಆರೋಪಿ ಆನಂದ್ ಲಿಫ್ಟ್ ಮೆಕ್ಯಾನಿಕ್ ಕೆಲಸ ಮಾಡುತ್ತಾನೆ. ಈ ಮೂವರು ಉಮಾ ಅವರಿಗೆ ಪರಿಚಿತರಾಗಿದ್ದರು.
ಮೂವರು ಆರೋಪಿಗಳು ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದರು. ಉಮಾ ಅವರು ಮೊಟ್ಟೆ ಅಂಗಡಿಯಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿದ್ದು, ಚೆನ್ನಾಗಿ ಹಣಕಾಸು ಸ್ಥಿತಿ ಚೆನ್ನಾಗಿರುವುದನ್ನು ಆರೋಪಿಗಳು ಗಮನಿಸಿದ್ದರು. ಹೇಗಾದರೂ ಮಾಡಿ ಆಕೆಯ ಮನೆಯಲ್ಲಿ ಕಳ್ಳತನ ಮಾಡಿದರೆ, ಸಾಲ ತೀರಿಸಿಕೊಂಡು ನಿರಾಳರಾಗಬಹುದು ಎಂದು ಚರ್ಚಿಸಿದ್ದರು. ಅದರಂತೆ ಮೂವರು ಉಮಾ ಅವರ ಮನೆಯ ಕಳ್ಳತನಕ್ಕೆ ಸಂಚು ರೂಪಿಸಿದ್ದರು.ನಕಲಿ ಬೀಗದ ಕೀ ಸಿದ್ಧಪಡಿಸಲು ಪ್ಲಾನ್:
ಉಮಾ ಅವರ ಮಗಳು ಬ್ಯೂಟಿಶೀಯನ್ ಆಗಿದ್ದು, ಮನೆಗಳಿಗೆ ತೆರಳಿ ಸೇವೆ ನೀಡುತ್ತಿದ್ದರು. ಈ ವಿಚಾರ ಆರೋಪಿ ಕಿರಣ್‌ಗೆ ಚೆನ್ನಾಗಿ ಗೊತ್ತಿತ್ತು. ಉಮಾ ಮತ್ತು ಅವರ ಮಗಳ ಬಳಿ ಮನೆಯ ಬೀಗದ ಕೀಗಳು ಇರುವ ವಿಚಾರವೂ ಗೊತ್ತಿತ್ತು. ಹೀಗಾಗಿ ನಕಲೀ ಕೀ ಮಾಡಿಸಿ ಕಳ್ಳತನ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಉಮಾ ಅವರು ಬೆಳಗ್ಗೆಯಿಂದ ಸಂಜೆ ವರೆಗೆ ಮೊಟ್ಟೆ ಅಂಗಡಿಯಲ್ಲಿ ಇರುತ್ತಿದ್ದರು. ಹೀಗಾಗಿ ಮನೆಯಲ್ಲೇ ಇರುತ್ತಿದ್ದ ಅವರ ಮಗಳು ಮನೆಯಲ್ಲಿ ಇಲ್ಲದಂತೆ ಮಾಡಬೇಕು ಮತ್ತು ಆಕೆಯ ಬಳಿ ಇರುವ ಮನೆಯ ಬೀಗದ ಕೀಯನ್ನು ನಕಲಿ ಮಾಡಲು ನಿರ್ಧರಿಸಿದ್ದರು.
ಮೇಕಪ್‌ಗೆ ಆಹ್ವಾನಿಸಿ ಕೀ ಕದ್ದರು:
ಅದರಂತೆ ಆರೋಪಿ ನಾರಾಯಣನ ಪತ್ನಿಗೆ ಮನೆಯಲ್ಲೇ ಮೇಕಪ್ ಮಾಡಲು ಉಮಾ ಅವರ ಮಗಳನ್ನು ಮನೆಗೆ ಕರೆಸಿಕೊಂಡಿದ್ದರು. ಈ ವೇಳೆ ಆಕೆ ಮೇಕಪ್ ಮಾಡುವಲ್ಲಿ ತಲ್ಲೀನರಾಗಿದ್ದಾಗ ಆಕೆಯ ಬ್ಯಾಗ್‌ನಿಂದ ಮನೆಯ ಕೀ ಎತ್ತಿಕೊಂಡು ನಕಲೀ ಕೀ ಮಾಡಿಸಿ ಬಳಿಕ ಅಸಲಿ ಕೀ ಅನ್ನು ಆಕೆಯ ಬ್ಯಾಗ್‌ಗೆ ಇರಿಸಿದ್ದರು.ನಕಲಿ ಕೀ ಬಳಸಿ ಹಗಲೇ ಕಳ್ಳತನ:
ಮಾ.29ರಂದು ಬೆಳಗ್ಗೆ ಉಮಾ ಅವರು ಎಂದಿನಂತೆ ಮೊಟ್ಟೆ ಅಂಗಡಿಗೆ ಬಂದಿದ್ದಾರೆ. ಈ ವೇಳೆ ಆಕೆಯ ಮಗಳಿಗೆ ಕರೆ ಮಾಡಿರುವ ಆರೋಪಿಗಳು ಜಯನಗರದಲ್ಲಿ ಪರಿಚಿತರೊಬ್ಬರಿಗೆ ಮೇಕಪ್ ಮಾಡಬೇಕು ಎಂದಿದ್ದಾರೆ. ಈ ವೇಳೆ ಆಕೆ ನಾನು ಮಂಡ್ಯದಲ್ಲಿ ಇರುವುದಾಗಿ ಹೇಳಿದ್ದಾರೆ. ಕಳ್ಳತನಕ್ಕೆ ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ ಆರೋಪಿಗಳು, ಸೀದಾ ಉಮಾ ಅವರ ಮನೆ ಬಳಿ ತೆರಳಿ ನಕಲಿ ಕೀ ಬಳಸಿ ಮನೆ ಪ್ರವೇಶಿಸಿ, ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಸಂಜೆ ಉಮಾ ಅಂಗಡಿ ಮುಚ್ಚಿಕೊಂಡು ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿತ್ತು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೇವರ ಹುಂಡಿಗೆ ₹20 ಸಾವಿರ!
ಆರೋಪಿಗಳು ಈ ಕಳ್ಳತನ ಯಶಸ್ವಿಯಾದರೆ ₹20 ಸಾವಿರವನ್ನು ಹುಂಡಿಗೆ ಹಾಕುವುದಾಗಿ ಮಲೆಮಹದೇಶ್ವರ ಸ್ವಾಮಿಗೆ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಅಂದು ಯಶಸ್ವಿಯಾಗಿ ಕಳ್ಳತನ ಮಾಡಿದ ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಮಾಡಿಸಿದ್ದರು. ಬಳಿಕ ಹುಂಡಿಗೆ ₹20 ಸಾವಿರ ಹಾಕಿ ಹರಕೆ ತೀರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.