ಕೊಟ್ಟಿದ್ದ ಬಾಡಿಗೆ ಕಾರನ್ನು ನಿಗದಿತ ಮಿತಿಗಿಂತ ಹೆಚ್ಚು ವೇಗವಾಗಿ ಓಡಿಸಿದ್ದೀರಿ ಎಂದು ವಿದ್ಯಾರ್ಥಿಗಳಿಗೆ ಚಿತ್ರ ಹಿಂಸೆ ನೀಡಿದ್ದ ಮೂವರ ಸೆರೆ

| Published : Nov 26 2024, 01:32 AM IST / Updated: Nov 26 2024, 04:38 AM IST

Five-people-were-arrested-today-by-Bahraich-Police-in-the-case-of-shooting-dead-a-youth-in-Maharajganj
ಕೊಟ್ಟಿದ್ದ ಬಾಡಿಗೆ ಕಾರನ್ನು ನಿಗದಿತ ಮಿತಿಗಿಂತ ಹೆಚ್ಚು ವೇಗವಾಗಿ ಓಡಿಸಿದ್ದೀರಿ ಎಂದು ವಿದ್ಯಾರ್ಥಿಗಳಿಗೆ ಚಿತ್ರ ಹಿಂಸೆ ನೀಡಿದ್ದ ಮೂವರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಟ್ಟಿದ್ದ ಬಾಡಿಗೆ ಕಾರನ್ನು ನಿಗದಿತ ಮಿತಿಗಿಂತ ಹೆಚ್ಚು ವೇಗವಾಗಿ ಓಡಿಸಿದ್ದೀರಿ ಎಂದು ವಿದ್ಯಾರ್ಥಿಗಳಿಗೆ ಚಿತ್ರ ಹಿಂಸೆ ನೀಡಿದ್ದ ಮೂವರನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

 ಬೆಂಗಳೂರು : ಪ್ರವಾಸಕ್ಕೆ ತೆರಳಲು ಕಾರು ಬಾಡಿಗೆಗೆ ಪಡೆದಿದ್ದ ವಿದ್ಯಾರ್ಥಿಗಳನ್ನು ಕೂಡಿ ಹಾಕಿ ₹50 ಸಾವಿರ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಚಂದ್ರಾಲೇಔಟ್ ನಿವಾಸಿಗಳಾದ ನಿತಿನ್(32), ಶಶಾಂಕ್(34) ಮತ್ತು ವಿನೋದ್(30) ಅವರಿಂದ ₹30 ಸಾವಿರ ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳು ನ.17ರಂದು ಐವರು ವಿದ್ಯಾರ್ಥಿಗಳನ್ನು ಕಚೇರಿಯೊಂದರಲ್ಲಿ ಕೂಡಿ ಹಾಕಿ ₹50 ಸಾವಿರ ಸುಲಿಗೆ ಮಾಡಿದ್ದರು. ಈ ಸಂಬಂಧ ವಿದ್ಯಾರ್ಥಿ ಮನೋಜ್‌ ಬನಿವಾಲ್‌ ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಿಸಲಾಗಿದೆ.

ಪ್ರಕರಣದ ವಿವರ:

ವಿದ್ಯಾರ್ಥಿ ಮನೋಜ್‌ ಬನಿವಾಲ್‌ ಹಾಗೂ ಆತನ ನಾಲ್ವರು ಸ್ನೇಹಿತರು ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾರೆ. ನ.17ರಂದು ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರು ಮಡಿಕೇರಿಗೆ ಪ್ರವಾಸಕ್ಕೆ ತೆರಳಲು ಸ್ನೇಹಿತರ ಮೂಲಕ ಆರೋಪಿ ವಿನೋದ್‌ನನ್ನು ಸಂಪರ್ಕಿಸಿದ್ದರು. ಒಂದು ದಿನದ ಪ್ರವಾಸಕ್ಕೆ ಕಾರನ್ನು ಬಾಡಿಗೆಗೆ ಕೇಳಿದ್ದಾರೆ.

ಒಂದು ದಿನದ ಪ್ರವಾಸಕ್ಕೆ ₹2,500 ಬಾಡಿಗೆ ಜತೆಗೆ ₹500 ಕಮಿಷನ್‌ ಸೇರಿ ಒಟ್ಟು ₹3 ಸಾವಿರ ಕೊಡುವಂತೆ ವಿನೋದ್‌ ಕೇಳಿದ್ದ. ಇದಕ್ಕೆ ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದರು. ಕಾರನ್ನು ಗಂಟೆಗೆ 100 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಾಯಿಸಬೇಕು ಎಂದು ವಿನೋದ್‌ ಷರತ್ತು ವಿಧಿಸಿದ್ದ. ಶ್ಯೂರಿಟಿಗಾಗಿ ವಿದ್ಯಾರ್ಥಿಯೊಬ್ಬನ ಲ್ಯಾಪ್‌ಟಾಪ್‌ ಪಡೆದುಕೊಂಡಿದ್ದ. ಬಳಿಕ ಷರತ್ತಿಗೆ ಒಪ್ಪಿದ ವಿದ್ಯಾರ್ಥಿಗಳು ಕಾರನ್ನು ಬಾಡಿಗೆಗೆ ಪಡೆದು ಮಡಿಕೇರಿ ಪ್ರವಾಸಕ್ಕೆ ತೆರಳಿದ್ದಾರೆ.

ಗರಿಷ್ಠ ವೇಗ ಮೀತಿ ನೆಪ, 1.20 ಲಕ್ಷ ರು.ಗೆ ಬೇಡಿಕೆ

ಮಡಿಕೇರಿ ಪ್ರವಾಸ ಮುಗಿಸಿ ಸಂಜೆ ನಗರಕ್ಕೆ ಬಂದ ವಿದ್ಯಾರ್ಥಿಗಳು, ಕಾರನ್ನು ವಾಪಸ್‌ ನೀಡಲು ವಿನೋದ್‌ನನ್ನು ಸಂಪರ್ಕಿಸಿದ್ದಾರೆ. ಈ ವೇಳೆ ನಾಗರಬಾವಿ ಮುಖ್ಯರಸ್ತೆಯ ಮಂಜುನಾಥ ಎಂಟರ್‌ಪ್ರೈಸಸ್‌ ಕಚೇರಿಗೆ ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದಾರೆ. ಈ ವೇಳೆ ಆರೋಪಿಗಳು, ನೀವು ಪ್ರವಾಸದ ವೇಳೆ ಕಾರನ್ನು 120 ಬಾರಿ ಗರಿಷ್ಠ ವೇಗದ ಮೀತಿ ದಾಟಿದ್ದೀರಿ. ಹೀಗಾಗಿ ₹1.20 ಲಕ್ಷ ಕೊಡಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಗರಿಷ್ಠ ವೇಗ ಮೀತಿ ಮೀರಿದ ಚಲನ್ ತೋರಿಸುವಂತೆ ಕೇಳಿದ್ದಾರೆ.ಕಚೇರಿಯಲ್ಲಿ ಕೂಡಿ ಹಾಕಿ ಹಲ್ಲೆ

ಈ ವೇಳೆ ಆರೋಪಿಗಳು ಯಾವುದೇ ಚಲನ್‌ ತೋರಿಸದೆ ₹1.20 ಲಕ್ಷ ಕೊಡಬೇಕು ಎಂದು ಬೆದರಿಸಿದ್ದಾರೆ. ಬಳಿಕ ಕಚೇರಿಯಲ್ಲೇ ವಿದ್ಯಾರ್ಥಿಗಳನ್ನು ಕೂಡಿ ಹಾಕಿ ಚಾಕು ತೋರಿಸಿ ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಗಳ ಖಾತೆಯಿಂದ ₹50 ಸಾವಿರ ವರ್ಗಾಯಿಸಿಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ, ಕಾಲೇಜು ಬಳಿ ಬಂದು ಚಿತ್ರಹಿಂಸೆ ನೀಡುವುದಾಗಿ ಬೆದರಿಕೆ ಹಾಕಿ ತಡರಾತ್ರಿ ಬಿಟ್ಟು ಕಳುಹಿಸಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.