ಗಾಂಜಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮೂವರು ಕಾನ್‌ಸ್ಟೇಬಲ್‌ ತಲೆದಂಡ : ಪೊಲೀಸ್‌ ಆಯುಕ್ತ ದಯಾನಂದ್‌

| Published : Aug 17 2024, 01:49 AM IST / Updated: Aug 17 2024, 04:43 AM IST

ಗಾಂಜಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮೂವರು ಕಾನ್‌ಸ್ಟೇಬಲ್‌ ತಲೆದಂಡ : ಪೊಲೀಸ್‌ ಆಯುಕ್ತ ದಯಾನಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಸ್ವತಃ ಗಾಂಜಾ ಪಾರ್ಟಿಯಲ್ಲಿ ಭಾಗವಹಿಸಿದ್ದ ಮೂವರು ಮುಖ್ಯ ಪೇದೆಗಳನ್ನು ಪೊಲೀಸ್‌ ಆಯುಕ್ತ ದಯಾನಂದ್‌ ಅಮಾನತು ಮಾಡಿದ್ದಾರೆ.

 ಬೆಂಗಳೂರು :  ಇತ್ತೀಚಿಗೆ ತಮ್ಮ ಪರಿಚಿತರ ಹುಟ್ಟುಹಬ್ಬ ನೆಪದಲ್ಲಿ ಆಯೋಜಿಸಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡ ಆರೋಪದ ಮೇರೆಗೆ ಮೂವರು ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ಗಳನ್ನು ನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿದ್ದಾರೆ.

ಶೇಷಾದ್ರಿಪುರ ಉಪವಿಭಾಗದ ಎಸಿಪಿ ಕಚೇರಿಯ ಆನಂದ್‌ಕುಮಾರ್, ಜೆ.ಬಿ.ನಗರ ಠಾಣೆಯ ಮಂಜುನಾಥ್ ಹಾಗೂ ಉಪ್ಪಾರಪೇಟೆ ಠಾಣೆಯ ಅನಂತರಾಜು ತಲೆದಂಡವಾಗಿದ್ದು, ಈ ಪಾರ್ಟಿ ಸಂಬಂಧ ಚಿಕ್ಕಜಾಲ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಸಹ ಈ ಮೂವರು ಆರೋಪಿಗಳಾಗಿದ್ದಾರೆ. ಕೆಲ ದಿನಗಳ ಹಿಂದೆ ಚಿಕ್ಕಜಾಲ ಸಮೀಪದ ತರಹುಣಸೇ ಗ್ರಾಮದಲ್ಲಿ ಈ ಪಾರ್ಟಿ ನಡೆದಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ಘಟನೆ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಈಶಾನ್ಯ ವಿಭಾಗದ ಡಿಸಿಪಿಗೆ ಸೂಚಿಸಿದ್ದರು. ಅಂತೆಯೇ ಡಿಸಿಪಿ ಸಲ್ಲಿಸಿದ ವರದಿ ಆಧರಿಸಿ ಹೆಡ್‌ ಕಾನ್‌ಸ್ಟೇಬಲ್‌ಗಳನ್ನು ಆಯುಕ್ತರು ಅಮಾತನುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಯುವ ಸಮೂಹದ ಜತೆ ಖಾಕಿ ಮಸ್ತಿ

ಚಿಕ್ಕಜಾಲದ ತರಹುಣಸೇ ಗ್ರಾಮದ ಸುರಭಿ ಹೋಂ ಸ್ಟೇನಲ್ಲಿ ಜು.19ರಂದು ಹುಟ್ಟುಹಬ್ಬದ ನಿಮಿತ್ತ ಆಯೋಜನೆಗೊಂಡಿದ್ದ ಪಾರ್ಟಿಗೆ ಹೆಡ್‌ ಕಾನ್‌ಸ್ಟೇಬಲ್‌ಗಳಾದ ಅನಂತರಾಜು, ಆನಂದ್ ಹಾಗೂ ಮಂಜುನಾಥ್‌ ಅವರಿಗೆ ಆಹ್ವಾನವಿತ್ತು. ಈ ಆಹ್ವಾನದ ಮೇರೆಗೆ ಪಾರ್ಟಿಯಲ್ಲಿ ಈ ಮೂವರು ಪೊಲೀಸರು ಸೇರಿದಂತೆ 22 ಮಂದಿ ಪಾಲ್ಗೊಂಡಿದ್ದರು.

ಆ ಔತಣಕೂಟದಲ್ಲಿ ಯುವಕ ಹಾಗೂ ಯುವತಿಯರ ಜತೆ ಹೆಡ್ ಕಾನ್‌ಸ್ಟೇಬಲ್‌ಗಳು ಮಸ್ತಿ ಮಾಡಿದ್ದರು. ಆದರೆ ತಡರಾತ್ರಿ ಧ್ವನಿವರ್ಧಕಗಳ ಬಳಕೆಗೆ ಆಕ್ಷೇಪಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಸ್ಥಳೀಯರು ಕರೆ ಮಾಡಿದ್ದರು. ಆಗ ಹೋಂ ಸ್ಟೇಗೆ ತೆರಳಿ ಚಿಕ್ಕಜಾಲ ಠಾಣೆ ಪಿಎಸ್‌ಐ ಮಹೇಶ್ ನೇತೃತ್ವದ ತಂಡವು ಪರಿಶೀಲಿಸಿದಾಗ ಮತ್ತಿನ ಲೋಕ ಬಯಲಾಗಿದೆ. ಕೂಡಲೇ ಪಾರ್ಟಿಯಲ್ಲಿದ್ದ ಮೂವರು ಪೊಲೀಸರು, 10 ಮಂದಿ ಯುವಕರು ಹಾಗೂ 9 ಯುವತಿಯರು ಸೇರಿದಂತೆ 22 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ಬಳಿಕ ಪಿಎಸ್‌ಐ ಮಹೇಶ್ ದೂರು ಆಧರಿಸಿ ಚಿಕ್ಕಜಾಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಯಿತು. ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹೆಡ್‌ ಕಾನ್‌ಸ್ಟೇಬಲ್‌ಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಕೊನೆಗೆ ಘಟನೆ ಕುರಿತು ಡಿಸಿಪಿ ಅವರಿಂದ ವರದಿ ಪಡೆದು ಆಯುಕ್ತ ದಯಾನಂದ್ ಶಿಸ್ತು ಕ್ರಮ ಜರುಗಿಸಿದ್ದಾರೆ.ಬುದ್ದಿ ಕಲಿಯದ ಎಚ್‌ಸಿ ಅನಂತ

ಆರೋಪಿತ ಹೆಡ್‌ ಕಾನ್‌ಸ್ಟೇಬಲ್‌ಗಳ ಪೈಕಿ ಅನಂತರಾಜು, 2016ರಲ್ಲಿ ನೋಟ್ ಬ್ಯಾನ್ ವೇಳೆ ಹಳೇ ನೋಟುಗಳನ್ನು ಅಕ್ರಮವಾಗಿ ಸಾಗಿಸಿದ ಆರೋಪದ ಮೇರೆಗೆ ಸೇವೆಯಿಂದಲೇ ವಜಾಗೊಂಡಿದ್ದರು. ಬಳಿಕ ಇಲಾಖಾ ಮಟ್ಟದ ವಿಚಾರಣೆ ನಡೆದು ಪ್ರಯಾಸಪಟ್ಟು ಮತ್ತೆ ಇಲಾಖೆಗೆ ಅವರು ಮರು ನಿಯುಕ್ತಿಗೊಂಡಿದ್ದರು.