ಮದ್ದೂರು ತಾಲೂಕಿನ ತೊಪ್ಪನಹಳ್ಳಿಯಲ್ಲಿ ಕಳೆದ 10 ವರ್ಷಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿ ತೊಪ್ಪನಹಳ್ಳಿಯ ಲೇ.ನಿಂಗಯ್ಯ ಪುತ್ರ ಕುಮಾರ ವಿಷ ಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

 ಮದ್ದೂರು : ತಾಲೂಕಿನ ತೊಪ್ಪನಹಳ್ಳಿಯಲ್ಲಿ ಕಳೆದ 10 ವರ್ಷಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯೊಬ್ಬ ವಿಷ ಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಜರುಗಿದೆ.ತೊಪ್ಪನಹಳ್ಳಿಯ ಲೇ.ನಿಂಗಯ್ಯ ಪುತ್ರ ಕುಮಾರ (40) ವಿಷ ಸೇವಿಸಿ ಆತ್ಮ*ತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದ ಈತನಿಗೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಕೊನೆ ಉಸಿರಿಳೆದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುತ್ತೇಶ್ ಹಾಗೂ ನಂದೀಶ್ ಕೊಲೆ ಪ್ರಕರಣದಲ್ಲಿ ಕುಮಾರ 17ನೇ ಆರೋಪಿ

ತೊಪ್ಪನಹಳ್ಳಿಯಲ್ಲಿ ಕಳೆದ 2016ರಲ್ಲಿ ಗ್ರಾಮದ ಮುತ್ತೇಶ್ ಹಾಗೂ ನಂದೀಶ್ ಕೊಲೆ ಪ್ರಕರಣದಲ್ಲಿ ಕುಮಾರ 17ನೇ ಆರೋಪಿಯಾಗಿದ್ದನು. ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಕೊಲೆ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಈತ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮದ್ದೂರು ಠಾಣೆಯಲ್ಲಿ ಕುಮಾರನ ವಿರುದ್ಧ ರೌಡಿಶೀಟ್ ತೆರೆಯಲಾಗಿತ್ತು.

ಹೋಟೆಲ್‌ನಲ್ಲಿ ಸಪ್ಲಿಯರ್ ಕೆಲಸ

ಬಳಿಕ ಜೀವನೋಪಾಯಕ್ಕಾಗಿ ಮಂಡ್ಯ ನಗರದ ಮೈಷುಗರ್ ಕಾರ್ಖಾನೆ ಸರ್ಕಲ್‌ನ ಹೋಟೆಲ್‌ನಲ್ಲಿ ಸಪ್ಲಿಯರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಕುಮಾರನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ಈ ಸಂಬಂಧ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೃತ ಕುಮಾರನ ಶವದ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಸ್ವಗ್ರಾಮ ತೊಪ್ಪನಹಳ್ಳಿಗೆ ತಂದು ಸಂಜೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.