ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಎನ್. ಕೋಡಿಹಳ್ಳಿ ಮತ್ತು ಒಡೆಯರ್ ಬಸಾಪುರ ಮಾರ್ಗ ಮಧ್ಯೆ ನಡೆದಿದೆ.ಸಮೀಪದ ಎನ್.ಕೋಡಿಹಳ್ಳಿಯ ದೊರೆಸ್ವಾಮಾಚಾರಿ ಪುತ್ರ ಮಹೇಶ್ (28) ಮೃತ ಯುವಕ.
ಮಂಗಳವಾರ ರಾತ್ರಿ ಹಲಗೂರು ಕಡೆಯಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ತೀವ್ರ ಗಾಯಗೊಂಡ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬುಧವಾರ ಮಧ್ಯಾಹ್ನ ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಹಿಂದುರುಗಿಸಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಡ್ಡರದೊಡ್ಡಿ ಅರುಣನ ಹತ್ಯೆ: ಮತ್ತೊರ್ವ ಆರೋಪಿ ಬಂಧನ
ಮದ್ದೂರು:ತಾಲೂಕಿನ ಸೋಮನಹಳ್ಳಿ ಸಮೀಪದ ಕೆಸ್ತೂರು ಕ್ರಾಸ್ ಸ್ಕಂದಾ ಲೇಔಟ್ ಬಳಿ ಕಳೆದ ಶುಕ್ರವಾರ ರಾತ್ರಿ ನಡೆದಿದ್ದ ವಡ್ಡರದೊಡ್ಡಿ ಪಿ.ಎನ್.ಅರುಣ ಹತ್ಯೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಟಿ.ನರಸೀಪುರ ಮೂಲದ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಟಿ.ನರಸೀಪುರ ತಾಲೂಕು ಯಡೆದೊರೆ ಗ್ರಾಮದ ನಾಗೇಶನ ಪುತ್ರ ನಿರಂಜನ್ ಬಂಧಿತ ಆರೋಪಿ. ಸೋಮನಹಳ್ಳಿ ಸಮೀಪದ ಕೆಸ್ತೂರು ಕ್ರಾಸ್ ತಿಮ್ಮ ದಾಸ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ನಿರಂಜನ್ ಮಧ್ಯದ ಆಸೆಗಾಗಿ ಆರೋಪಿಗಳಾದ ವಿಕಾಸ್, ಭರತ್ ಗೌಡ, ನಿತ್ಯಾನಂದ, ಹೇಮಂತ, ಚಂದನ್, ಕುಮಾರ ಹಾಗೂ ಶ್ರೀನಿವಾಸ್ ಅವರೊಂದಿಗೆ ಸೇರಿ ಅರುಣನ ಕೊಲೆಗೆ ನೆರವಾಗಿದ್ದನು.ಈ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳು ನೀಡಿದ ಹೇಳಿಕೆ ಆಧಾರದ ಮೇಲೆ ಪೊಲೀಸರು ತಲೆಮರೆಸಿಕೊಂಡಿದ್ದ ನಿರಂಜನನ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದರು. ಮದ್ದೂರು ಬಸ್ ನಿಲ್ದಾಣದಲ್ಲಿ ಇದ್ದಾನೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ನಿರಂಜನನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಮ್ಮೆ ಮೇಯಿಸುತ್ತಿದ್ದ ವ್ಯಕ್ತಿ ಶಿಂಷಾ ನದಿಗೆ ಬಿದ್ದು ಸಾವುಮದ್ದೂರು:
ಎಮ್ಮೆ ಮೇಯಿಸಲು ಹೋಗಿದ್ದ ವ್ಯಕ್ತಿ ಶಿಂಷಾ ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಬೂದಗುಪ್ಪೆ ಗ್ರಾಮದ ಬಳಿ ಮಂಗಳವಾರ ಜರುಗಿದೆ.ಗ್ರಾಮದ ಶಿವಲಿಂಗಯ್ಯ (54) ಮೃತ ವ್ಯಕ್ತಿ. ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈತನ ಶವಕ್ಕಾಗಿ ಶೋಧ ಕಾರ್ಯ ನಡೆದಿದೆ. ದಿನನಿತ್ಯ ಎಮ್ಮೆ ಮೇಯಿಸಲು ಹೋಗುತ್ತಿದ್ದ ಶಿವಲಿಂಗಯ್ಯ ಮಂಗಳವಾರ ಶಿಂಷಾ ನದಿ ದಡದಲ್ಲಿ ಎಮ್ಮೆ ಬಾಲ ಹಿಡಿದುಕೊಂಡು ನದಿ ದಡದಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ನದಿ ಪಾತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗಿದ್ದ ಕಾರಣ ಶಿವಲಿಂಗಯ್ಯನ ಶವ ನದಿಯ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.