ರಾಜ್ಯದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸೈಬರ್ ಅಪರಾಧಗಳ ಕುರಿತು ತರಬೇತಿ: ಡಾ.ಜಿ.ಪರಮೇಶ್ವರ

| N/A | Published : Mar 16 2025, 01:49 AM IST / Updated: Mar 16 2025, 06:05 AM IST

ಸಾರಾಂಶ

ರಾಜ್ಯದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸೈಬರ್ ಅಪರಾಧಗಳ ಕುರಿತು ಹೆಚ್ಚಿನ ಅರಿವು ಮತ್ತು ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

 ಬೆಂಗಳೂರು : ರಾಜ್ಯದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸೈಬರ್ ಅಪರಾಧಗಳ ಕುರಿತು ಹೆಚ್ಚಿನ ಅರಿವು ಮತ್ತು ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ಸಿಐಡಿ ಹಾಗೂ ಸೈಬರ್ ಕ್ರೈಂ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ(ಸಿಸಿಐಟಿಆರ್‌)ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಸಿಐಡಿ ಡಿಕೋಡ್‌’ ಸೈಬರ್ ಅಪರಾಧ ತನಿಖಾ ಶೃಂಗಸಭೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸೈಬರ್ ಅಪರಾಧಗಳಿಗೆ ಯಾವುದೇ ಇತಿಮಿತಿಗಳಿಲ್ಲ. ಪ್ರಪಂಚದಲ್ಲಿ ಆಗುತ್ತಿರುವ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸಿಸಿಐಟಿಆರ್ ಸ್ಥಾಪಿಸಲಾಗಿದೆ. ಈವರೆಗೆ ರಾಜ್ಯದ 46 ಸಾವಿರಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.

ಬೆಂಗಳೂರಲ್ಲಿ ದಾಖಲಾಗುತ್ತಿರುವ ಸಾಮಾನ್ಯ ಅಪರಾಧಗಳ ಪೈಕಿ ಶೇ.30ರಷ್ಟು ಸೈಬರ್ ಅಪರಾಧಗಳು ದಾಖಲಾಗುತ್ತಿವೆ. ವೈಟ್‌ಫೀಲ್ಡ್ ವಿಭಾಗದ ವ್ಯಾಪ್ತಿಯಲ್ಲಿ ಶೇ.40ರಷ್ಟು ಸೈಬರ್ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆರಂಭಿಕ ಹಂತದಲ್ಲೇ ಹೆಚ್ಚಿನ ಒತ್ತು ನೀಡಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರಾಜ್ಯದಲ್ಲಿ 2023ನೇ ಸಾಲಿನಲ್ಲಿ 22 ಸಾವಿರ ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಬ್ಯಾಂಕ್ ಅಕೌಂಟ್, ಡೇಟಾ ಹ್ಯಾಕ್, ಸರ್ಕಾರಿ ಖಾತೆಗಳು ಹ್ಯಾಕ್‌ ಆಗುವುದು ಸೇರಿ ನಾನಾ ರೀತಿಯ ಸೈಬರ್ ಅಪರಾಧಗಳು ಆಗುತ್ತಿವೆ. ಇದನ್ನು ತಡೆಗಟ್ಟದೆ ಹೋದರೆ ಮುಂದಿನ ದಿನಗಳಲ್ಲಿ ತೊಂದರೆಗಳಾಗುತ್ತವೆ. ಸಾಮಾನ್ಯ ಅಪರಾಧಗಳಿಗಿಂತ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ ಎಂದರು.ತಾಂತ್ರಿಕ ಬಲವರ್ಧನೆ ಹೆಚ್ಚಳದ ಅಗತ್ಯ: ಕಾನೂನು ಸುವ್ಯವಸ್ಥೆ ಬಲಪಡಿಸಲು ತಂತ್ರಜ್ಞಾನ ಮತ್ತು ತರಬೇತಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಜಾಗತಿಕವಾಗಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ತಾಂತ್ರಿಕ ಬಲವರ್ಧನೆ ಹೆಚ್ಚಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಿಐಡಿ ಡಿಕೋಡ್ ಶೃಂಗಸಭೆ ಸಹಕಾರಿ. ಹ್ಯಾಕಥಾನ್ ಮತ್ತು ಸೈಬರ್ ಲಾ ಐಡಿಯಾಥಾನ್‌ನಂಥ ಕಾರ್ಯಕ್ರಮಗಳು ಸುರಕ್ಷಿತ ಡಿಜಿಟಲ್ ಕರ್ನಾಟಕ ಮತ್ತು ಸುರಕ್ಷಿತ ಭಾರತ ನಿರ್ಮಿಸುವ ಬದ್ಧತೆ ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಸಿಐಡಿ ಈ ಹಿಂದೆ ಆಯೋಜಿಸಿದ್ದ ಹ್ಯಾಕಥಾನ್ ಮತ್ತು ಸೈಬರ್ ಲಾ ಐಡಿಯಾಥಾನ್‌ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗೃಹ ಸಚಿವರು ಬಹುಮಾನ ವಿತರಿಸಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌, ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌, ಹಿರಿಯ ಪೊಲೀಸ್‌ ಅಧಿಕಾರಿಗಳು, ವಿಷಯ ತಜ್ಞರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.