ನಿಷೇಧಿತ ಗಣಿ ಪ್ರದೇಶದಿಂದ ಸೈಜುಗಲ್ಲು, ಬೋಡ್ರೆಸ್ ಸಾಗಣೆ: 8 ಲಾರಿಗಳು ಪೊಲೀಸ್‌ ವಶಕ್ಕೆ

| Published : Feb 08 2024, 01:34 AM IST

ನಿಷೇಧಿತ ಗಣಿ ಪ್ರದೇಶದಿಂದ ಸೈಜುಗಲ್ಲು, ಬೋಡ್ರೆಸ್ ಸಾಗಣೆ: 8 ಲಾರಿಗಳು ಪೊಲೀಸ್‌ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಆರ್ ಎಸ್ ಸುತ್ತಮುತ್ತಲಿನ 20 ಕಿ.ಮೀ. ಪ್ರದೇಶ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಲೆಕ್ಕಿಸದೆ ಬೇಬಿ ಬೆಟ್ಟದ ಸುತ್ತಮುತ್ತಲ‌ ಪ್ರದೇಶದಲ್ಲಿ ನಿರಾಂತಕವಾಗಿ ಗಣಿಗಾರಿಕೆ ನಡೆಯುತ್ತಿದೆ. ಹೀಗಾಗಿ ಪೊಲೀಸರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು‌ ಎನ್ನುತ್ತಾರೆ ಸಾರ್ವಜನಿಕರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಿಂದ ಅನಧಿಕೃತವಾಗಿ ಸೈಜುಗಲ್ಲು ಮತ್ತು ಬೋಡ್ರೆಸ್ ತುಂಬಿಕೊಂಡು ಬರುತ್ತಿದ್ದ 8 ಲಾರಿಗಳನ್ನು ವಶಪಡಿಸಿಕೊಂಡ ಗಣಿ ಇಲಾಖೆ ಅಧಿಕಾರಿಗಳು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಕಟ್ಟೇರಿ ಮಾರ್ಗವಾಗಿ ಮೈಸೂರು ಕಡೆಗೆ ತೆರಳಿದ 8 ಲಾರಿಗಳನ್ನು ಕೆಆರ್ ಎಸ್ ಬಳಿ ವಶಪಡಿಸಿಕೊಂಡ ಗಣಿ ಇಲಾಖೆ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗಮಧು ನೇತೃತ್ವದ ತಂಡ 6 ಲಾರಿಗಳನ್ನು ಕೆಆರ್‌ಎಸ್ ಪೊಲೀಸ್ ಠಾಣೆ ಹಾಗೂ 2 ಲಾರಿಗಳನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕೆಆರ್ ಎಸ್ ಸುತ್ತಮುತ್ತಲಿನ 20 ಕಿ. ಪ್ರದೇಶ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಲೆಕ್ಕಿಸದೆ ಬೇಬಿ ಬೆಟ್ಟದ ಸುತ್ತಮುತ್ತಲ‌ ಪ್ರದೇಶದಲ್ಲಿ ನಿರಾಂತಕವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅನಧಿಕೃತ ಕಲ್ಲು ಸಾಗಣೆ‌ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವ ಗಣಿ ಇಲಾಖೆ ಅಧಿಕಾರಿಗಳಿಗೆ ಯಾರೂ ಸಾಥ್ ನೀಡುತ್ತಿಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್, ಸೆಸ್ಕ್, ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಪೊಲೀಸರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು‌ ಎಂದು ಆಗ್ರಹಿಸಿದ್ದಾರೆ.