ಸಾರಾಂಶ
ಬೆಂಗಳೂರು : ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ಪೆಟ್ರೋಲ್ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಿರುತೆರೆ ಸಹ ನಿರ್ದೇಶಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಾವಣಗೆರೆ ಮೂಲದ ಎಚ್.ಆರ್.ಕಿರಣ್ ಕುಮಾರ್(25) ಮೃತ ದುರ್ದೈವಿ. ಭಾನುವಾರ ಸಂಜೆ ಆರ್.ಆರ್.ನಗರ ಆರ್ಚ್ ಕಡೆಯಿಂದ ನಾಯಂಡಹಳ್ಳಿ ಕಡೆಗೆ ತೆರಳುವಾಗ ಮೈಸೂರು-ಬೆಂಗಳೂರು ರಸ್ತೆಯ ಪಂತರಪಾಳ್ಯ ಮೆಟ್ರೋ ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದೆ.
ರಾಜರಾಜೇಶ್ವರಿನಗರ ನಿವಾಸಿಯಾಗಿರುವ ಮೃತ ಕಿರಣ್ ಕುಮಾರ್ ಕಿರುತೆರೆ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಸಂಜೆ ಸುಮಾರು 6.10ಕ್ಕೆ ಬೈಕ್‌ನಲ್ಲಿ ಕಾರ್ಯ ನಿಮಿತ್ತ ನಾಯಂಡಹಳ್ಳಿ ಸಿಗ್ನಲ್ ಕಡೆಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಪಂತರಪಾಳ್ಯ ಮೆಟ್ರೋ ರೈಲು ನಿಲ್ದಾಣದ ಕೆಳ ಭಾಗದಲ್ಲಿ ತೆರಳುವಾಗ ಹಿಂದಿನಿಂದ ವೇಗವಾಗಿ ಬಂದ ಪೆಟ್ರೋಲ್ ಟ್ಯಾಂಕರ್ ವಾಹನ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಕಿರಣ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕಿರಣ್ ಕುಮಾರ್ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಟ್ಯಾಂಕರ್ ವಾಹನದ ಚಾಲಕನ ಬಂಧನ: ಪೆಟ್ರೋಲ್ ಟ್ಯಾಂಕರ್ ವಾಹನ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಪೆಟ್ರೋಲ್ ಟ್ಯಾಂಕರ್ ವಾಹನದ ಚಾಲಕ ಅರವಿಂದ ಕುಮಾರ್ ಯಾದವ್(35) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಬ್ಯಾಟರಾಯಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.