ರಸ್ತೆಯಲ್ಲಿ ದ್ವಿಚಕ್ರ ವಾಹನ ಡಿಕ್ಕಿ: ಹಿರಿಯ ವಕೀಲ ಸಾವು

| Published : Feb 28 2024, 02:32 AM IST

ರಸ್ತೆಯಲ್ಲಿ ದ್ವಿಚಕ್ರ ವಾಹನ ಡಿಕ್ಕಿ: ಹಿರಿಯ ವಕೀಲ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಕಾರಿನ ಬಳಿಗೆ ನಡೆದು ಬರುವಾಗ ದ್ವಿಚಕ್ರ ವಾಹನ ಡಿಕ್ಕಿಯಾಗಿ ಹಿರಿಯ ವಕೀಲರೊಬ್ಬರು ಮೃತಪಟ್ಟಿರುವ ಘಟನೆ ಬಸವನಗುಡಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾರಿನ ಬಳಿಗೆ ನಡೆದು ಬರುವಾಗ ದ್ವಿಚಕ್ರ ವಾಹನ ಡಿಕ್ಕಿಯಾಗಿ ಹಿರಿಯ ವಕೀಲರೊಬ್ಬರು ಮೃತಪಟ್ಟಿರುವ ಘಟನೆ ಬಸವನಗುಡಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜಯನಗರ ನಿವಾಸಿ ಡಾಕಪ್ಪ(71) ಮೃತ ವಕೀಲ. ಸೋಮವಾರ ರಾತ್ರಿ 8.30ರ ಸುಮಾರಿಗೆ ಕೃಷ್ಣರಾವ್‌ ಪಾರ್ಕ್‌ ಬಳಿ ನಡೆದುಕೊಂಡು ಬರುವಾಗ ಈ ಅಪಘಾತ ಸಂಭವಿಸಿದೆ.

ವಕೀಲ ಡಾಕಪ್ಪ ಅವರು ಬಸವನಗುಡಿಯ ಡಿವಿಜಿ ರಸ್ತೆಯಲ್ಲಿ ಕಚೇರಿ ಹೊಂದಿದ್ದಾರೆ. ಸೋಮವಾರ ಬೆಳಗ್ಗೆ ಕಾರಿನಲ್ಲಿ ಕಚೇರಿಗೆ ಬಂದಿದ್ದರು. ಕೃಷ್ಣರಾವ್‌ ಪಾರ್ಕ್‌ ಬಳಿ ಕಾರನ್ನು ನಿಲುಗಡೆ ಮಾಡಿದ್ದರು. ಕೆಲಸ ಮುಗಿಸಿ ಮನೆಗೆ ತೆರಳಲು ರಾತ್ರಿ 8.30ರ ಸುಮಾರಿಗೆ ಕಾರಿನ ಬಳಿಗೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಡಿ.ಎಂ.ಸರ್ಕಲ್‌ ಕಡೆಯಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಡಾಕಪ್ಪ ಅವರಿಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಡಾಕಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ನೆರವಿಗೆ ಧಾವಿಸಿದ ಸ್ಥಳೀಯರು, ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮಂಗಳವಾರ ಮುಂಜಾನೆ 2.50ರ ಸುಮಾರಿಗೆ ಮೃತಪಟ್ಟಿದ್ದಾರೆ.

ಅಪಘಾತಕ್ಕೆ ದ್ವಿಚಕ್ರ ವಾಹನ ಸವಾರನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಸವಾರ ಆದಿತ್ಯ ಎನ್.ಮೂರ್ತಿ ಎಂಬುವವನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಬಸವಗುಡಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.