ಸಾರಾಂಶ
ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ‘ಡಿಜಿಟಲ್ ಅರೆಸ್ಟ್’ಗೊಳಪಡಿಸಿ ದೈಹಿಕ ತಪಾಸಣೆ ನೆಪದಲ್ಲಿ ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಸೈಬರ್ ದುರುಳರು ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ‘ಡಿಜಿಟಲ್ ಅರೆಸ್ಟ್’ಗೊಳಪಡಿಸಿ ದೈಹಿಕ ತಪಾಸಣೆ ನೆಪದಲ್ಲಿ ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಸೈಬರ್ ದುರುಳರು ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.
ಪೂರ್ವ ವಿಭಾಗದಲ್ಲಿ ಥಾಯ್ಲೆಂಡ್ ದೇಶದ ಮಹಿಳೆ ಸೇರಿ ಇಬ್ಬರ ಮೇಲೆ ಈ ಅವಮಾನವೀಯ ಕೃತ್ಯ ನಡೆದಿದ್ದು, ಸಂತ್ರಸ್ತೆಯರ ದೂರು ಆಧರಿಸಿ ಸಿಇಎನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ವಿವಸ್ತ್ರಗೊಳಿಸಿ ಕಿರುಕುಳ ನೀಡಿದ್ದಲ್ಲದೆ ಸಂತ್ರಸ್ತೆಯರಿಂದ 57 ಸಾವಿರ ರು. ಹಣವನ್ನು ಬ್ಯಾಂಕ್‌ನಿಂದ ದುಷ್ಕರ್ಮಿಗಳು ವರ್ಗಾಯಿಸಿಕೊಂಡಿದ್ದಾರೆ.
ಏನಿದು ಘಟನೆ?
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ತನ್ನ ಬಾಲ್ಯ ಸ್ನೇಹಿತೆ ಭೇಟಿಯಾಗಲು ಥಾಯ್ಲೆಂಡ್‌ನಲ್ಲಿ ಶಿಕ್ಷಕಿಯಾಗಿರುವ ವಿದೇಶಿ ಮಹಿಳೆ ಬಂದಿದ್ದಳು. ಆಗ ಸ್ನೇಹಿತೆಯ ಮನೆಯಲ್ಲಿ ತಂಗಿದ್ದ ಥಾಯ್ಲೆಂಡ್ ಮಹಿಳೆಗೆ ಜು.17ರಂದು ಬೆಳಿಗ್ಗೆ 11ರ ಸುಮಾರಿಗೆ ಅನಾಮಧೇಯ ನಂಬರ್‌ನಿಂದ ಕರೆಯೊಂದು ಬಂದಿದೆ. ಆಗ ಕರೆ ಸ್ವೀಕರಿಸಿದಾಗ ತಾನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಎಂದು ಅಪರಿಚಿತ ಪರಿಚಯಿಸಿಕೊಂಡಿದ್ದ.
ಜೆಟ್ ಏರ್‌ವೇಸ್‌ಗೆ ಸಂಬಂಧಿಸಿದ ಹಣ ವರ್ಗಾವಣೆಯಲ್ಲಿ ತಾವು ಭಾಗಿಯಾಗಿದ್ದೀರಿ ಎಂದು ಆರೋಪಿಸಿದ್ದ. ಅಲ್ಲದೇ ಅಕ್ರಮ ಹಣ ವರ್ಗಾವಣೆ, ಕಳ್ಳಸಾಗಣೆ ಹಾಗೂ ಹತ್ಯೆ ಪ್ರಕರಣಗಳಲ್ಲಿ ಸಹ ನಿಮ್ಮ ಹೆಸರಿದೆ ಎಂದು ಸೈಬರ್ ವಂಚಕ ಬೆದರಿಸಿದ್ದಾನೆ. ಈ ಧಮ್ಕಿಗೆ ಪೂರಕವಾಗಿ ತನ್ನ ಬಳಿ ದಾಖಲೆಗಳಿವೆ ಎಂದಿದ್ದಾನೆ. ಈ ಮಾತಿನಿಂದ ಭೀತಿಗೊಳಗಾದ ವಿದೇಶಿ ಮಹಿಳೆ, ತಾನು ಕೆಲವು ದಿನಗಳ ಹಿಂದೆಯಷ್ಟೇ ಭಾರತಕ್ಕೆ ಭೇಟಿ ನೀಡಿದ್ದೇನೆ. ಆ ಪ್ರಕರಣಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಈ ವೇಳೆ ಮತ್ತೆ ಬಂಧಿಸುವುದಾಗಿ ಬೆದರಿಸಿದ್ದಾನೆ. ಕೊನೆಗೆ ಡಿಜಿಟಲ್ ಅರೆಸ್ಟ್‌ಗೊಳಪಡಿಸಿ ದೈಹಿಕ ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆ ಹಾಗೂ ಅವರ ಸ್ನೇಹಿತೆಯನ್ನು ವಿವಸ್ತ್ರಗೊಳಿಸುವಂತೆ ಮಾಡಿದ್ದಾನೆ. ಬಳಿಕ ಅವರಿಂದ ಡೆಬಿಟ್ ಕಾರ್ಡ್ ನಂಬರ್ ಪಡೆದು ಅದರಿಂದ 57 ಸಾವಿರ ರು. ಹಣ ದೋಚಿದ್ದಾರೆ ಎಂದು ತಿಳಿದು ಬಂದಿದೆ.