ನಿವೃತ್ತ ಪೊಲೀಸ್ ಅಧಿಕಾರಿ ಸೊಸೆಯ ಚಿನ್ನಾಭರಣ ದೋಚಿದ್ದ ಇಬ್ಬರು ಕದೀಮರು ಮಂಡ್ಯದಲ್ಲಿ ಬಂಧನ

| Published : Jul 20 2024, 12:57 AM IST / Updated: Jul 20 2024, 05:09 AM IST

Truck driver arrested for stealing cashew nuts

ಸಾರಾಂಶ

ಅತಿಥಿಗಳ ಸೋಗಿನಲ್ಲಿ ಕಲ್ಯಾಣ ಮಂಟಪಕ್ಕೆ ನುಗ್ಗಿ ನಿವೃತ್ತ ಪೊಲೀಸ್ ಅಧಿಕಾರಿ ಸೊಸೆಗೆ ಸೇರಿದ ಚಿನ್ನಾಭರಣಗಳನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

 ಮದ್ದೂರು : ಅತಿಥಿಗಳ ಸೋಗಿನಲ್ಲಿ ಕಲ್ಯಾಣ ಮಂಟಪಕ್ಕೆ ನುಗ್ಗಿ ನಿವೃತ್ತ ಪೊಲೀಸ್ ಅಧಿಕಾರಿ ಸೊಸೆಗೆ ಸೇರಿದ ಚಿನ್ನಾಭರಣಗಳನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಲೀಲಾವತಿ ಬಡಾವಣೆಯ ವಿನಾಯಕ ಮೆಸ್ ಸಮೀಪದ ನಿವಾಸಿ ಲೇಟ್ ದೇವಯ್ಯ ಪುತ್ರ ಎಚ್.ಡಿ.ಪುನೀತ್ (26) ಹಾಗೂ ಮೈಸೂರು ಚಾಮುಂಡಿ ಬೆಟ್ಟದ ಹಿಂಭಾಗದ ಛಾಯಾ ಲೇಔಟ್ ನಿವಾಸಿ ಲೇಟ್ ಕೃಷ್ಣರ ಪುತ್ರ ಕ್ಯಾಬ್ ಚಾಲಕ ಸಚಿನ್ ಕುಮಾರ್ (30) ಬಂಧಿತ ಆರೋಪಿಗಳು.

ಬಂಧಿತರಿಂದ ಕಲ್ಯಾಣ ಮಂಟಪದಲ್ಲಿ ಕಳವು ಮಾಡಿದ್ದ ಸುಮಾರು 4 ಲಕ್ಷ ರು. ಮೌಲ್ಯದ 60 ಗ್ರಾಂ ತೂಕದ ಚಿನ್ನದ ಲಾಂಗ್ ಚೈನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಎಚ್.ಡಿ.ಪುನೀತ್ ಮದ್ದೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅಂಗಡಿ ಮಾಲೀಕನಾಗಿದ್ದರೆ, ಮತ್ತೋರ್ವ ಆರೋಪಿ ಸಚಿನ್ ಕುಮಾರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು.

ಈ ಇಬ್ಬರು ಆರೋಪಿಗಳು ಕಳೆದ ಫೆಬ್ರವರಿ 11ರಂದು ಪಟ್ಟಣದ ಶಿವಪುರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸ್ನೇಹಿತರ ಪುತ್ರನ ವಿವಾಹ ಪೂರ್ವ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದ ನಿವೃತ್ತ ಪಿಎಸ್ಐ ಸಿದ್ದೇಗೌಡ ಅವರ ಸೊಸೆ ಅನುಷಾ ವರನ ಕೊಠಡಿಯಲ್ಲಿ ಇಟ್ಟಿದ್ದ 60 ಗ್ರಾಂ ತೂಕದ ಚಿನ್ನದ ಆಭರಣವನ್ನು ಕೊಠಡಿ ಬೀಗ ಮುರಿದು ಆರೋಪಿಗಳು ಅಪಹರಿಸಿ ಪರಾರಿಯಾಗಿದ್ದರು. ನಂತರ ಆರೋಪಿಗಳು ಕಳುವು ಮಾಡಿದ್ದ ಚಿನ್ನದ ಸರವನ್ನು ಬೆಂಗಳೂರಿನ ಜಾಲಮಂಗಲದ ಖಾಸಗಿ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು.

ಈ ಸಂಬಂಧ ಅನುಷಾ ಅವರ ಮಾವ ಸಿದ್ದೇಗೌಡ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ನಂತರ ಕಲ್ಯಾಣ ಮಂಟಪದಲ್ಲಿ ಇದ್ದ ಸಿಸಿಟಿವಿ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಪಿ.ಕೃಷ್ಣಪ್ಪ, ಸಿಪಿಐ ಶಿವಕುಮಾರ್, ವೆಂಕಟೇಗೌಡರ ಮಾರ್ಗದರ್ಶನದಲ್ಲಿ ಪಿಎಸ್ಐ ಮಂಜುನಾಥ್, ಅಪರಾಧ ವಿಭಾಗದ ಪಿಎಸ್ಐ ರವಿ, ಸಿಬ್ಬಂದಿ ಕುಮಾರಸ್ವಾಮಿ, ವಿಷ್ಣುವರ್ಧನ್ ಹಾಗೂ ಚಿರಂಜೀವಿ ಅವರುಗಳು ಸತತ ಆರು ತಿಂಗಳ ಕಾಲ ಆರೋಪಿಗಳ ಪತ್ತೆಗೆ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿದ್ದರು.

ಮಾಹಿತಿ ಅನ್ವಯ ಆರೋಪಿಗಳಾದ ಪುನೀತ್ ಮತ್ತು ಸಚಿನ್ ಕುಮಾರ್, ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಇದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರ ತಂಡ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಚಿನ್ನದ ಸರ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತರನ್ನು ವಿಚಾರಣೆ ನಂತರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ವಿಶೇಷ ತಂಡ ರಚಿಸಲಾಗಿತ್ತು ವಶಪಡಿಸಿಕೊಳ್ಳಲಾಗಿದೆ.