ಸಾರಾಂಶ
ನಗರ ಸಂಚಾರ ಪೂರ್ವ ವಿಭಾಗದ ವಿವಿಧ ರಸ್ತೆಗಳ ಪಾದಾಚಾರಿ ಮಾರ್ಗಗಳಲ್ಲಿ ಅಧಿಕೃತವಾಗಿ ಅಂಗಡಿ ಮುಂಗಟ್ಟು ಹಾಗೂ ಬೋರ್ಡ್‌ಗಳನ್ನು ಇರಿಸಿಕೊಂಡು ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಸಂಚಾರ ಪೊಲೀಸರು 84 ಪ್ರಕರಣ ದಾಖಲಿಸಿ, 250ಕ್ಕೂ ಅಧಿಕ ಬೋರ್ಡ್‌ಗಳನ್ನು ಜಪ್ತಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ಸಂಚಾರ ಪೂರ್ವ ವಿಭಾಗದ ವಿವಿಧ ರಸ್ತೆಗಳ ಪಾದಾಚಾರಿ ಮಾರ್ಗಗಳಲ್ಲಿ ಅಧಿಕೃತವಾಗಿ ಅಂಗಡಿ ಮುಂಗಟ್ಟು ಹಾಗೂ ಬೋರ್ಡ್‌ಗಳನ್ನು ಇರಿಸಿಕೊಂಡು ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಸಂಚಾರ ಪೊಲೀಸರು 84 ಪ್ರಕರಣ ದಾಖಲಿಸಿ, 250ಕ್ಕೂ ಅಧಿಕ ಬೋರ್ಡ್‌ಗಳನ್ನು ಜಪ್ತಿ ಮಾಡಿದ್ದಾರೆ.ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಫೆ.20ರಿಂದ 23ರ ವರೆಗೆ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ತಿಪ್ಪಸಂದ್ರ ಮುಖ್ಯರಸ್ತೆ, ಇಂದಿರಾನಗರ 80 ಅಡಿ ಮತ್ತು 100 ಅಡಿ ರಸ್ತೆ, ಮಾಸ್ಕ್ ಮಸೀದಿ ರಸ್ತೆ, ಡಿಸ್‌ಪೆನ್ಸರಿ ರಸ್ತೆ, ಲೇಡಿ ಕರ್ಜನ್ ರಸ್ತೆ, ಟ್ಯಾನರಿ ರಸ್ತೆ, ಹೆಣ್ಣೂರು ಮುಖ್ಯ ರಸ್ತೆ, ಹೆಚ್.ಬಿ.ಆರ್.ಲೇಔಟ್, ಕೆ.ಬಿ.ಸಂದ್ರ ರಸ್ತೆ, ಕಸ್ತೂರಿ ನಗರ ಮುಖ್ಯ ರಸ್ತೆ, ವರ್ತೂರು ರಸ್ತೆ ಮತ್ತು ಹೊರ ವರ್ತುಲ ರಸ್ತೆ ಹಾಗೂ ಐಟಿಪಿಎಲ್ ಮುಖ್ಯ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಪಾದಾಚಾರಿ ಮಾರ್ಗಗಳಲ್ಲಿ ಅಂಗಡಿ ಮುಂಗಟ್ಟು ಇರಿಸದಂತೆ ಹಲವು ಬಾರಿ ಸೂಚನೆ ನೀಡಿದ್ದರ ಹೊರತಾಗಿಯೂ ಅಂಗಡಿ ಇರಿಸಿದ್ದ ಮಾಲೀಕರ ವಿರುದ್ಧ 7 ಪ್ರಕರಣಗಳು ಸೇರಿದಂತೆ ಒಟ್ಟು 84 ಪ್ರಕರಣಗಳನ್ನು ದಾಖಲಿಸಲಾಗಿದೆ. ಪಾದಾಚಾರಿ ಮಾರ್ಗದಲ್ಲಿ ಇರಿಸಿದ್ದ 250ಕ್ಕೂ ಅಧಿಕ ಬೋರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದ್ದು, ಪಾದಾಚಾರಿ ಮಾರ್ಗಗಳಲ್ಲಿ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುವವ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದ್ದಾರೆ.