ದಸರಾ ಹಬ್ಬದ ಸಡಗರ ಹೊತ್ತಿನಲ್ಲಿ ರಾಜಧಾನಿಯ ನಿರ್ಮಾಣ ಹಂತದ ಕಟ್ಟಡದ 5ನೇ ಮಹಡಿಯಲ್ಲಿ ಶಂಕಾಸ್ಪದ ‘ಬ್ಯಾಟರಿ’ ಮಾದರಿ ವಸ್ತುವೊಂದು ಸ್ಫೋಟಗೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
-ಪುಲಿಕೇಶಿ ನಗರದ ಫ್ರೇಜರ್ ಟೌನ್ ಸಮೀಪದ ಕಟ್ಟಡದಲ್ಲಿ ಘಟನೆ । ಸ್ಫೋಟದ ಸುತ್ತ ಹಲವು ಅನುಮಾನ । ಸುಧಾರಿತ ಸ್ಫೋಟಕ ಬಾಂಬ್ ಶಂಕೆ
ಸೆಕ್ಯೂರಿಟಿ ಗಾರ್ಡ್, ಪೇಂಟರ್ಗೆ ಬಾಯಿ, ಕೈಗೆ ಗಾಯ । ಸ್ಥಳದಲ್ಲಿ ಪತ್ತೆಯಾದ ವೈರ್, ಟೈಮರ್ ಬ್ಯಾಟರಿ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ರವಾನೆಕನ್ನಡಪ್ರಭ ವಾರ್ತೆ ಬೆಂಗಳೂರು
ದಸರಾ ಹಬ್ಬದ ಸಡಗರ ಹೊತ್ತಿನಲ್ಲಿ ರಾಜಧಾನಿಯ ನಿರ್ಮಾಣ ಹಂತದ ಕಟ್ಟಡದ 5ನೇ ಮಹಡಿಯಲ್ಲಿ ಶಂಕಾಸ್ಪದ ‘ಬ್ಯಾಟರಿ’ ಮಾದರಿ ವಸ್ತುವೊಂದು ಸ್ಫೋಟಗೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಇದು ಸುಧಾರಿತ ಸ್ಫೋಟಕ ಬಾಂಬ್ (ಐಇಡಿ) ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ಪತ್ತೆಯಾದ ವೈರ್, ಟೈಮರ್ ಹಾಗೂ ಬ್ಯಾಟರಿ ಗಳನ್ನು ಪರೀಕ್ಷಿಸಿ ವಿಧಿವಿಜ್ಞಾನ ಪ್ರಯೋಗಾಲದ ತಜ್ಞರ ವರದಿ ಬಳಿಕ ಐಇಡಿಯೇ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪುಲಿಕೇಶಿ ನಗರದ (ಫ್ರೇಜರ್ ಟೌನ್) ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಶಂಕಾಸ್ಪದ ವಸ್ತು ಸ್ಫೋಟವಾಗಿದೆ. ಘಟನೆಯಲ್ಲಿ ಆ ಕಟ್ಟಡದ ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್ ಹಾಗೂ ಪೇಂಟರ್ ಸೂರಜ್ ಕುಮಾರ್ ಗಾಯಗೊಂಡಿದ್ದು, ಇಬ್ಬರು ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ. ಈ ಕೃತ್ಯದ ಹಿಂದಿನ ವ್ಯಕ್ತಿಗಳ ಪತ್ತೆಗೆ ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಗಳು ಕಾರ್ಯಾಚರಣೆಗಿಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಾರ್ಸಲ್ ಕಳುಹಿಸಿದ್ದು ಯಾರು?:ಪುಲಿಕೇಶಿನಗರ ಸಮೀಪ ರಾಮಮೂರ್ತಿ ನಗರದ ಉದ್ಯಮಿಯೊಬ್ಬರು ಏಳು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ ಎರಡು ಹಂತಗಳು ವಾಣಿಜ್ಯ ಮಳಿಗೆಗಳು ಹಾಗೂ ಇನ್ನುಳಿದ ಅಂತಸ್ತುಗಳಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ ಎರಡು ವಾರಗಳಿಂದ ಆ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ಸಾಂ ಮೂಲದ ಅಲ್ಲಾವುದ್ದೀನ್ ಕಾವಲುಗಾರನಾಗಿದ್ದಾನೆ. ಎರಡು ದಿನಗಳಿಂದ ಉತ್ತರಪ್ರದೇಶದ ಸೂರಜ್ ಹಾಗೂ ಆತನ ಸೋದರ ಅಭಿಕುಮಾರ್ ಪೇಂಟಿಂಗ್ ಕೆಲಸದಲ್ಲಿ ತೊಡಗಿದ್ದರು. ಬಾಬು ಸಾಬ್ ಪಾಳ್ಯದಲ್ಲಿ ಈ ಸೋದರರು ವಾಸವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಂದಿನಂತೆ ಕೆಲಸದಲ್ಲಿ ಮಂಗಳವಾರ ಅಲ್ಲಾವುದ್ದೀನ್ ಕೆಲಸದಲ್ಲಿ ನಿರತನಾಗಿದ್ದ. ಆಗ ಮಧ್ಯಾಹ್ನ 1.30ಕ್ಕೆ ಆತನಿಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ‘ಬ್ಯಾಟರಿ’ ಯನ್ನು ಪಾರ್ಸಲ್ ಕಳುಹಿಸಿದ್ದಾನೆ. ಈ ವಸ್ತು ಸ್ವೀಕರಿಸಿದ ಆತ, ಏಳನೇ ಮಹಡಿಯಲ್ಲಿ ಪೇಂಟಿಂಗ್ ಮಾಡುತ್ತಿದ್ದ ಸೂರಜ್ನನ್ನು ಐದನೇ ಮಹಡಿಗೆ ಕರೆಸಿಕೊಂಡಿದ್ದಾನೆ. ಬಳಿಕ ಸೂರಜ್ಗೆ ಪಾರ್ಸಲ್ ಕೊಟ್ಟು ತೆರೆಯುವಂತೆ ಅಲ್ಲಾವುದ್ದೀನ್ ಹೇಳಿದ್ದಾನೆ. ಆ ಬ್ಯಾಟರಿಯ ಸ್ವಿಚ್ ಆನ್ ಮಾಡುತ್ತಿದ್ದಂತೆ ಒಮ್ಮೆಗೆ ಸ್ಫೋಟಗೊಂಡಿದೆ. ಘಟನೆಯಲ್ಲಿ ಸೂರಜ್ಗೆ ಬಾಯಿ ಹಾಗೂ ಕೈ ಸೇರಿದಂತೆ ದೇಹದ ಇತರ ಭಾಗಗಳಿಗೆ ಸುಟ್ಟ ಗಾಯವಾಗಿದ್ದು, ಅಲ್ಲಾವುದ್ದೀನ್ ಕೈ ಸುಟ್ಟಿದೆ.ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ಗಾಯಾಳುಗಳನ್ನು ಸೂರಜ್ ಸೋದರರು ಕರೆ ತಂದು ದಾಖಲಿಸಿದ್ದಾನೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ವೈದ್ಯರು, ಗಾಯಗೊಂಡ ಬಗ್ಗೆ ವಿಚಾರಿಸಿದಾಗ ಬ್ಯಾಟರಿ (ಟಾರ್ಚ್) ಸ್ಫೋಟವಾಯಿತು ಎಂದಿದ್ದಾರೆ. ಆಗ ಕೂಡಲೇ ಪುಲಿಕೇಶಿನಗರ ಠಾಣೆಗೆ ವೈದ್ಯಕೀಯ ವರದಿಯನ್ನು (ಎಂಎಲ್ಸಿ) ಬೌರಿಂಗ್ ಆಸ್ಪತ್ರೆ ವೈದ್ಯರು ಕಳುಹಿಸಿದ್ದಾರೆ.
ಈ ವರದಿ ಸ್ವೀಕರಿಸಿದ ಪೊಲೀಸರು, ರಾತ್ರಿ 8 ಗಂಟೆಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ತನಿಖೆಯಲ್ಲಿ ಅಲ್ಲಾವುದ್ದೀನ್ ಗೊಂದಲಕಾರಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಬಳಿಕ ಹಿರಿಯ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಶಂಕಾಸ್ಪದ ವಸ್ತು ಸ್ಫೋಟದ ಬಗ್ಗೆ ಸುದ್ದಿ ತಿಳಿದು ಬಾಂಬ್ ನಿಷ್ಕ್ರಿಯ ದಳ, ಕೇಂದ್ರ ಮತ್ತು ರಾಜ್ಯ ಗುಪ್ತಚರ ಅಧಿಕಾರಿಗಳು ಸಹ ದೌಡಾಯಿಸಿ ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.--‘ಬ್ಯಾಟರಿ’ಯಲ್ಲಿದಿದ್ದು ಐಇಡಿ ಬಾಂಬ್?ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟವಾಗಿದ್ದು ಬ್ಯಾಟರಿ ಮಾದರಿಯಲ್ಲಿ ಅಡಗಿಸಿಟ್ಟಿದ್ದ ಸುಧಾರಿತ ಬಾಂಬ್ ಆಗಿರಬಹುದು ಎಂದು ಹಿರಿಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.ಘಟನಾ ಸ್ಥಳದಲ್ಲಿ ವೈರ್ ಹಾಗೂ ಬ್ಯಾಟರಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಐಇಡಿ ಎಂಬುದು ಗೊತ್ತಾಗಿದೆ. ಆದರೆ ಈ ಬಗ್ಗೆ ಎಫ್ಎಸ್ಎಲ್ ವರದಿ ನಿರೀಕ್ಷಿಸಲಾಗುತ್ತಿದ್ದು, ತಜ್ಞರ ವರದಿ ಬಳಿಕ ಸ್ಫೋಟದ ವಸ್ತು ಬಗ್ಗೆ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕೃತ್ಯದ ಹಿಂದೆ ಭಯೋತ್ಪಾದಕ ಸಂಘಟನೆ ನೆರಳು?ಈ ಸ್ಫೋಟದ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡವಿರುವ ಸಹ ಶಂಕೆ ವ್ಯಕ್ತವಾಗಿದೆ. ದಸರಾ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಭಯೋತ್ಪಾದಕ ಸಂಘಟನೆ ಯತ್ನಿಸಿರಬಹುದು. ಹೀಗಾಗಿ ಗಾಯಗೊಂಡಿರುವ ಅಲ್ಲಾವುದ್ದೀನ್ ಹಾಗೂ ಸೂರಜ್ ಪೂರ್ವಾಪರ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲಾವುದ್ದೀನ್ಗೆ ಮಂಗಳವಾರ ಮಧ್ಯಾಹ್ನ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿ ಬಗ್ಗೆ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.ಮಾಲಿಕನಿಗೆ ಹಣ ಸುಲಿಗೆಗೆ ಬೆದರಿಕೆ? ಇನ್ನೊಂದೆಡೆ ಆ ಕಟ್ಟಡದ ಮಾಲಿಕನಿಗೆ ಹಣಕ್ಕಾಗಿ ಬೆದರಿಸಲು ಕೆಲ ದುಷ್ಕರ್ಮಿಗಳು ಯತ್ನಿಸಿರುವ ಬಗ್ಗೆ ಸಹ ಗುಮಾನಿ ಇದೆ. ಹೀಗಾಗಿ ಕಟ್ಟಡದ ಮಾಲಿಕರನ್ನು ವಿಚಾರಣೆ ನಡೆಸಿ ಪೊಲೀಸರು ವಿವರ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.