ಐಷಾರಾಮಿ ಬೆನ್ಜ್‌ ಕಾರನ್ನು ಬಳಕೆ : ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಬಂಗಾರಿ ಸಂಕಷ್ಟ

| Published : Jan 07 2025, 07:15 AM IST

Vinay Kulakarni

ಸಾರಾಂಶ

ಚಂದ್ರಾಲೇಔಟ್‌ ಠಾಣೆಯಲ್ಲಿದಾಖಲಾಗಿರುವ ಐಶ್ವರ್ಯ ಗೌಡ ದಂಪತಿ ವಿರುದ್ಧದ ವಂಚನೆ ಪ್ರಕರಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ವಿನಯ್ ಕುಲಕರ್ಣಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಬೆಂಗಳೂರು : ಚಂದ್ರಾಲೇಔಟ್‌ ಠಾಣೆಯಲ್ಲಿದಾಖಲಾಗಿರುವ ಐಶ್ವರ್ಯ ಗೌಡ ದಂಪತಿ ವಿರುದ್ಧದ ವಂಚನೆ ಪ್ರಕರಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ವಿನಯ್ ಕುಲಕರ್ಣಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಐಶ್ವರ್ಯ ಗೌಡ ಅವರ ಪತಿ ಹರೀಶ್ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಐಷಾರಾಮಿ ಬೆನ್ಜ್‌ ಕಾರನ್ನು ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ ಬಳಕೆ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಐಶ್ವರ್ಯ ಗೌಡ ದಂಪತಿಯೊಂದಿಗೆ ಸಂಬಂಧ, ವ್ಯವಹಾರ ಕುರಿತು ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಈ ವಂಚನೆ ಪ್ರಕರಣದ ಆರೋಪಿಗಳಾಗಿರುವ ಐಶ್ವರ್ಯ ಗೌಡ ದಂಪತಿ ಹಾಗೂ ದೂರುದಾರೆ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿ ಮಾಲಕಿ ವನಿತಾ ಐತಾಳ್‌ಗೆ ವಿನಯ್ ಕುಲಕರ್ಣಿ ಚಿರಪರಿತರು. ಈ ವಂಚನೆ ಪ್ರಕರಣ ದಾಖಲಾಗುವ ಮುನ್ನ ಐಶ್ವರ್ಯ ಗೌಡ ಮತ್ತು ದೂರುದಾರೆ ವನಿತಾ ಐತಾಳ್ ಅವರನ್ನು ಕಾಂಗ್ರೆಸ್ ಶಾಸಕರಾದ ವಿನಯ್ ಕುಲಕರ್ಣಿ ಅವರು ನಗರದ ಯಶವಂತಪುರದಲ್ಲಿರುವ ಖಾಸಗಿ ಹೋಟೆಲ್ ವೊಂದರಲ್ಲಿ ಭೇಟಿ ಮಾಡಿ ಸಂಧಾನ ನಡೆಸಲು ಯತ್ನಿಸಿದ್ದರು ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಐಶ್ವರ್ಯ ಗೌಡ ಮತ್ತು ವನಿತಾ ಐತಾಳ್ ಸಹ ಮಾಧ್ಯಮಗಳೊಂದಿಗೆ ಮಾತನಾಡುವಾಗ ವಿನಯ್ ಕುಲಕರ್ಣಿ ಅವರು ತಮ್ಮಿಬ್ಬರಿಗೂ ಪರಿಚವಿರುವ ಬಗ್ಗೆ ಹೇಳಿಕೊಂಡಿದ್ದರು.

ಯಶವಂತಪುರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಇಬ್ಬರನ್ನೂ ಕೂರಿಸಿ ಬುದ್ದಿವಾದ ಹೇಳಿದ್ದಾಗಿಯೂ ಐಶ್ವರ್ಯ ಗೌಡ ಹಾಗೂ ವನಿತಾ ಐತಾಳ್ ತಿಳಿಸಿದ್ದರು.