ಸಾರಾಂಶ
ಬೆಂಗಳೂರು : ನಗರದ ವಿವಿಧೆಡೆ ದ್ವಿಚಕ್ರ ವಾಹನ ಹಾಗೂ ಮನೆಗಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಜ್ಞಾನಭಾರತಿ ಠಾಣೆ ಪೊಲೀಸರು ಸುಮಾರು ₹11 ಲಕ್ಷ ಮೌಲ್ಯದ 130 ಗ್ರಾಂ ಚಿನ್ನಾಭರಣ ಹಾಗೂ ಮೂರು ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.
ಜರಗನಹಳ್ಳಿಯ ದೀಪಕ್ ಅಲಿಯಾಸ್ ದೀಪು(23), ಬನ್ನೇರುಘಟ್ಟ ಮುಖ್ಯರಸ್ತೆಯ ಶಾನುಭೋಗನಹಳ್ಳಿಯ ಜೈದೀಪು ಅಲಿಯಾಸ್ ಜಂಗ್ಲಿ(24) ಹಾಗೂ ವಾಜರಹಳ್ಳಿಯ ಅದ್ವೈತ್ ಗೌಡ(23) ಬಂಧಿತರು.
ಕಳೆದ ಸೆಪ್ಟೆಂಬರ್‌ನಲ್ಲಿ ಮಂಗನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್‌ನ ನಿವಾಸಿ ಖಾಲಿದ್ ನಯಾಜ್ ಖಾನ್ ಎಂಬುವವರ ಮನೆಯ ಬೀಗ ಮುರಿದು ದುಷ್ಕರ್ಮಿಗಳು ನಗದು, ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಪ್ರಮುಖ ಆರೋಪಿ ರಘು ಅಲಿಯಾಸ್ ಪೆಪ್ಸಿ ಎಂಬಾತನನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಇದೀಗ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ, ಸದ್ಯ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಹಲವು ಪ್ರಕರಣಗಳಲ್ಲಿ ಬಂಧಿತರಾಗಿ ಜೈಲು ಸೇರಿ ಬಳಿಕ ಜಾಮೀನು ಪಡೆದು ಹೊರಗೆ ಬಂದು ಮತ್ತೆ ತಮ್ಮ ದುಷ್ಕೃತ್ಯಗಳನ್ನು ಮುಂದುವರೆಸಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
7 ಪ್ರಕರಣ ಪತ್ತೆ: ಆರೋಪಿಗಳ ಬಂಧನದಿಂದ ಬ್ಯಾಡರಹಳ್ಳಿ, ಸುಬ್ರಹ್ಮಣ್ಯಪುರ, ಕುಂಬಳಗೋಡು, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಮನೆಗಳವು ಹಾಗೂ ಹನುಮಂತನಗರ ಎರಡು ಹಾಗೂ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಸೇರಿ ಒಟ್ಟು ಏಳು ಅಪರಾಧ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.