ಬಿಎಸ್‌ವೈ ಬಂಧನಕ್ಕೆ ವಾರಂಟ್‌

| Published : Jun 14 2024, 06:01 AM IST

BSY news

ಸಾರಾಂಶ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿ ನಗರದ ಪೋಕ್ಸೋ ವಿಶೇಷ ನ್ಯಾಯಾಲಯ ಗುರುವಾರ ಮಹತ್ವದ ಆದೇಶ ಮಾಡಿದೆ.

ಬೆಂಗಳೂರು  :  ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿ ನಗರದ ಪೋಕ್ಸೋ ವಿಶೇಷ ನ್ಯಾಯಾಲಯ ಗುರುವಾರ ಮಹತ್ವದ ಆದೇಶ ಮಾಡಿದೆ.

ಇದರ ಬೆನ್ನಲ್ಲೇ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರ ಪತ್ತೆಗೆ ಹುಡುಕಾಟ ನಡೆಸಿದ್ದು, ದೆಹಲಿಯಲ್ಲಿ ಇರಬಹುದು ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡವೊಂದು ಅಲ್ಲಿಗೆ ತೆರಳಿದೆ.

ದೆಹಲಿಯಲ್ಲಿರುವ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ನಿವಾಸ ಹಾಗೂ ಕರ್ನಾಟಕ ಭವನದಲ್ಲಿ ಸಿಐಡಿ ಹುಡುಕಾಟ ನಡೆಸಿದೆ. ಆದರೆ ಎಲ್ಲಿಯೂ ಸಹ ಮಾಜಿ ಮುಖ್ಯಮಂತ್ರಿಗಳು ಪತ್ತೆಯಾಗಿಲ್ಲ. ಆದರೆ ದೆಹಲಿ ಸುತ್ತಮುತ್ತ ಪ್ರದೇಶದಲ್ಲಿ ಯಡಿಯೂರಪ್ಪನವರು ಇದ್ದಾರೆ ಎಂಬ ಮಾಹಿತಿ ಮೇರೆಗೆ ಸಿಐಡಿ ಕಾರ್ಯಾಚರಣೆ ಮುಂದುವರೆಸಿದೆ ಎಂದು ತಿಳಿದು ಬಂದಿದೆ.

ಬಂಧನಕ್ಕೆ ಕೋರ್ಟ್‌ ಆದೇಶ:

ಪ್ರಕರಣ ಸಂಬಂಧ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಜಾರಿಗೊಳಿಸಲು ಕೋರಿ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯದ (ಪೋಕ್ಸೋ ವಿಶೇಷ ಕೋರ್ಟ್‌) ನ್ಯಾಯಾಧೀಶ ಎನ್.ಎಂ. ರಮೇಶ್ ಅವರು ಆದೇಶ ನೀಡಿದ್ದಾರೆ.

ವಿಚಾರಣೆ ವೇಳೆ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯಕ್, ಪ್ರಕರಣದಲ್ಲಿ ಆರೋಪಿಯಾಗಿರುವ ಯಡಿಯೂರಪ್ಪ ಅವರಿಗೆ ವಿಚಾರಣೆ ಹಾಜರಾಗಲು ಸೂಚಿಸಿ ಸಿಐಡಿ ನೋಟಿಸ್‌ ನೀಡಿದೆ. ಆದರೆ, ವಿಚಾರಣೆಗೆ ಹಾಜರಾಗಲು ಅವರು ಸಮಯ ಕೋರುತ್ತಿದ್ದಾರೆ. ಸಿಐಡಿ ನೋಟಿಸ್‌ಗಳನ್ನು ಕಡೆಗಣಿಸುತ್ತಿದ್ದಾರೆ. ಈಗಾಗಲೇ ಕೆಲವು ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ಅವರಿಗೆ ಇನ್ನೂ ಸಮಯ ನೀಡಿದರೆ ಇನ್ನುಳಿದ ಸಾಕ್ಷ್ಯಗಳನ್ನೂ ನಾಶಪಡಿಸುವ ಸಾಧ್ಯತೆಯಿದೆ. ಹೀಗಾಗಿ, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದ್ದು, ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿಗೊಳಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ತನಿಖಾಧಿಕಾರಿಗೆ ಆರೋಪಿಯನ್ನು ಬಂಧಿಸುವ ಅಧಿಕಾರ ಇದೆಯಲ್ಲವೇ?’ ಎಂದು ಪ್ರಶ್ನಿಸಿದರು.

ವಿಶೇಷ ಅಭಿಯೋಜಕರು ಉತ್ತರಿಸಿ, ಆರೋಪಿಯೊಂದಿಗೆ ಕೆಲಕಾಲದ ಮಾತುಕತೆಯನ್ನು ದೂರುದಾರ ಮಹಿಳೆ (ಸಂತ್ರಸ್ತೆಯ ತಾಯಿ) ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಘಟನೆ ನಡೆದ ದಿನವೇ ಆರೋಪಿಯು 2 ಲಕ್ಷ ರು. ಮೊತ್ತವನ್ನು ಬೇಡ ಎಂದರೂ ಆಕೆಯ ಪರ್ಸ್‌ನಲ್ಲಿ ಬಲವಂತದಿಂದ ಇರಿಸಿದ್ದಾರೆ. ಹಣ ಕೊಟ್ಟು ಸಂತ್ರಸ್ತೆ ಹಾಗೂ ದೂರುದಾರೆಯನ್ನು ಮೌನವಾಗಿಸಲು ಪ್ರಯತ್ನ ಮಾಡಿದ್ದಾರೆ. ಆದರೆ, ವಿಡಿಯೋವನ್ನು ಅಳಿಸಿ ಹಾಕಿಸಿದ್ದಾರೆ. ಆದರೆ, ಮೂಲ ವಿಡಿಯೋ ತನಿಖಾಧಿಕಾರಿಗಳ ಬಳಿಯಿದೆ. ಆರೋಪಿಯನ್ನು ಸುಮ್ಮನೆ ಬಿಟ್ಟರೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುವ ಎಲ್ಲ ಸಾಧ್ಯತೆಗಳಿವೆ ಎಂದು ಬಲವಾಗಿ ವಾದಿಸಿದರು.

ಅಲ್ಲದೆ, ವಾಸ್ತವಾಗಿ ಸಂತ್ರಸ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ. ನ್ಯಾಯ ಪಡೆಯಲು ಕಾನೂನು ನೆರವು ನೀಡುವಂತೆ ಕೋರಿಯೇ ದೂರುದಾರೆ (ಸಂತ್ರಸ್ತೆಯ ತಾಯಿ) ಆರೋಪಿಯ ಬಳಿಗೆ ಹೋಗಿದ್ದರು. ಮಾಜಿ ಮುಖ್ಯಮಂತ್ರಿಗಳೆಂದು ನ್ಯಾಯ ಕೇಳಿ ಹೋದರೆ, ಅವರೇ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲಿಯೂ ಸಹ ಸಂತ್ರಸ್ತೆಗೆ ಅನ್ಯಾಯವಾಗಿದೆ ಎಂದು ವಿವರಿಸಿದರು.

ಆರೋಪಿಯು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು. ಸಾಕಷ್ಟು ಪ್ರಭಾವಿಯಾಗಿದ್ದಾರೆ. ಅವರ ಓರ್ವ ಪುತ್ರ ಸಂಸದರಾಗಿದ್ದರೆ, ಮತ್ತೊಬ್ಬ ಪುತ್ರ ಶಾಸಕರಾಗಿದ್ದಾರೆ. ಅದೂ ಸಹ ರಾಜಕೀಯ ಪಕ್ಷವೊಂದರ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಅತಹವರನ್ನು ವಿಚಾರಣೆಗೆ ಕರೆಯಿಸಿ ತನಿಖೆಗೆ ಒಳಪಡಿಸುವುದು ಕಷ್ಟದ ಕೆಲಸ. ತಮ್ಮ ರಾಜಕೀಯ ಪ್ರಭಾವ ಮತ್ತು ಹಣದ ಬಲ ಬಳಸಿ ಕಾನೂನು ಕೈಯಿಂದ ತಪ್ಪಿಸಿಕೊಳ್ಳುವ ಹಾಗೂ ಸಾಕ್ಷಿಗಳಿಗೆ ಒತ್ತಡ ಮತ್ತು ಬೆದರಿಕೆ ಹಾಕಿ ಘಟನೆಯ ಸತ್ಯಾಂಶ ಹೊರಬಾರದ ರೀತಿಯಲ್ಲಿ ನೋಡಿಕೊಳ್ಳುವ ಸಾಧ್ಯತೆಯಿದೆ. ತನಿಖಾಧಿಕಾರಿಗಳ ಬಳಿ ಸಾಕಷ್ಟು ಸಾಕ್ಷ್ಯಗಳಿವೆ. ಮೇಲ್ನೋಟಕ್ಕೆ ಈಗಾಗಲೇ ಶೇ.80ರಷ್ಟು ತನಿಖೆ ಪೂರ್ಣಗೊಂಡಿದೆ. ಇನ್ನುಳಿದ ದಾಖಲೆಗಳ ಶೋಧ ನಡೆಸಬೇಕಿದೆ. ಅದಕ್ಕಾಗಿ ಆರೋಪಿ ವಿವರಣೆ ಪಡೆಯಬೇಕಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.

ಬೆಳಗಿನ ಕಲಾಪದಲ್ಲಿ ವಾದ ಆಲಿಸಿದ್ದ ನ್ಯಾಯಾಧೀಶರು, ಸಂಜೆ 4.30ಕ್ಕೆ ಯಡಿಯೂರಪ್ಪ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿದರು. ಈ ವೇಳೆ ನ್ಯಾಯಾಲಯದಲ್ಲಿ ಸಿಐಡಿಯ ತನಿಖಾಧಿಕಾರಿಯಾದ ಡಿವೈಎಸ್‌ಪಿ ಎಂ.ಜೆ.ಪೃಥ್ವಿ ಹಾಜರಿದ್ದರು.

ಬಿಎಸ್‌ವೈ ಮನವಿ ಪ್ರಾಮಾಣಿಕವಾಗಿಲ್ಲ: ಸರ್ಕಾರಿ ವಕೀಲ

ವಿಚಾರಣೆಗೆ ಹಾಜರಾಗಲು ಸೂಚಿಸಿ ಆರೋಪಿಗೆ ಸಿಐಡಿ ನೀಡಿದೆ. ಅದಕ್ಕೆ ಉತ್ತರಿಸಿರುವ ಆರೋಪಿಯು ತಮಗೆ ದೆಹಲಿಯಲ್ಲಿ ಸಭೆಯಿದೆ. ಆದ ಕಾರಣ ವಿಚಾರಣೆಗೆ ಹಾಜರಾಗಲು ಜೂ.17ರವರೆಗೆ ಕಾಲಾವಕಾಶ ನೀಡಬೇಕು ಎಂದು ಕೋರಿದ್ದಾರೆ. ಅವರ ಈ ಮನವಿ ಪ್ರಾಮಾಣಿಕವಾಗಿಲ್ಲ. ಆರೋಪಿ ದೆಹಲಿಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಆದರೆ, ದೆಹಲಿ ಲೊಕೇಶನ್ ಪತ್ತೆ ಆಗುತ್ತಿಲ್ಲ. ಸಮಯ ಕೇಳುತ್ತಿರುವುದು ಕೇವಲ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ. ಹಾಗಾಗಿ, ಕೂಡಲೇ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕಿದೆ ಎಂದು ವಿಶೇಷ ಅಭಿಯೋಜಕರು ನ್ಯಾಯಾಧೀಶರಿಗೆ ಮನವಿ ವಿವರಿಸಿದರು.