ಸಾರಾಂಶ
ಕೆಎಸ್ಸಾರ್ಟಿಸಿ ಬಸ್ ಗಾಜು ಪುಡಿ ಮಾಡಿದ ಆಟೋ ಚಾಲಕರನ್ನು ಬೆನ್ನಟ್ಟಿ ಹಿಡಿದ ಬೆಂಗಳೂರು ಪೊಲೀಸರು
ಕನ್ನಡಪ್ರಭ ವಾರ್ತೆ ಬೆಂಗಳೂರು
ಕುಡಿದ ಅಮಲಿನಲ್ಲಿ ಮೆಜೆಸ್ಟಿಕ್ ಸಮೀಪ ವಾಹನ ನಿಲುಗಡೆ ವಿಚಾರವಾಗಿ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಗಾಜು ಅನ್ನು ಒಡೆದು ದುಂಡಾವರ್ತನೆ ಮಾಡಿದ್ದ ಇಬ್ಬರು ಆಟೋ ಚಾಲಕರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.ಗೋರಿಪಾಳ್ಯದ ರಿಯಾಜ್ ಹಾಗೂ ಇರ್ಫಾನ್ ಬಂಧಿತರಾಗಿದ್ದು, ಆರೋಪಿಗಳಿಂದ ಆಟೋಗಳನ್ನು ಜಪ್ತಿ ಮಾಡಲಾಗಿದೆ. ಮೆಜೆಸ್ಟಿಕ್ ಸಮೀಪ ಶಾಂತಲಾ ಜಂಕ್ಷನ್‌ನಲ್ಲಿ ಬಸ್‌ಗಳ ಮೇಲೆ ಜಾಕ್ ಹಾಗೂ ಕಬ್ಬಿಣದ ರಾಡ್‌ಗಳಿಂದ ದಾಳಿ ನಡೆಸಿ ಮಂಗಳವಾರ ರಾತ್ರಿ ಪರಾರಿಯಾಗಿದ್ದರು. ಆಗ ಬೆನ್ನತ್ತಿ ಆರೋಪಿಗಳನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕುಡಿದು ಆಟೋದಲ್ಲಿ ರಿಯಾಜ್ ಹಾಗೂ ಇರ್ಫಾನ್ ಮನೆಗೆ ಮರಳುತ್ತಿದ್ದರು. ಆಗ ಶಾಂತಲಾ ಜಂಕ್ಷನ್ ಬಳಿ ಆಟೋಗೆ ಪಕ್ಕದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಬಂದು ನಿಂತಿವೆ. ತಮ್ಮ ಆಟೋಗೆ ಬಸ್‌ಗಳು ಅಡ್ಡಬಂದಿವೆ ಎಂದು ಮದ್ಯದ ಅಮಲಿನಲ್ಲಿದ್ದ ಆರೋಪಿಗಳು ಕೋಪಗೊಂಡು ಈ ಕೃತ್ಯ ಎಸಗಿದ್ದಾರೆ. ಆಟೋದಲ್ಲಿದ್ದ ಜಾಕ್ ಹಾಗೂ ರಾಡ್ ಅನ್ನು ತೆಗೆದುಕೊಂಡು ಮೆಜೆಸ್ಟಿಕ್ ಬಳಿ ನಿಲುಗಡೆ ಮಾಡಿದ್ದ ಬಸ್‌ಗಳ ಕಿಟಕಿ ಗಾಜುಗಳನ್ನು ಪುಡಿಗಟ್ಟಿ ಕಾಲ್ಕಿತ್ತಿದ್ದರು. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ ಹೊಯ್ಸಳ ಸಿಬ್ಬಂದಿ, ಬಸ್‌ಗಳ ಗಾಜು ಒಡೆದು ಆಟೋದಲ್ಲಿ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗಳನ್ನು ಅಟ್ಟಿಸಿಕೊಂಡು ಹೋಗಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.