ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನ ಕದಿತ್ತಿದ್ದ ಕಳ್ಳಿ ಸರೆ

| Published : Aug 31 2024, 01:41 AM IST / Updated: Aug 31 2024, 04:28 AM IST

gold hallmarking rules

ಸಾರಾಂಶ

ಜಾತ್ರೆ, ಸಂತೆ, ಬಸ್‌ಗಳು ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಖತರ್ನಾಕ್‌ ಕಳ್ಳಿಯನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಜಾತ್ರೆ, ಸಂತೆ, ಬಸ್‌ಗಳು ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಖತರ್ನಾಕ್‌ ಕಳ್ಳಿಯನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾಸನದ ಅರಸೀಕೆರೆ ಮೂಲದ ಶಾರದಾ(28) ಬಂಧಿತೆ. ಆರೋಪಿಯಿಂದ ಸುಮಾರು 40 ಲಕ್ಷ ರು. ಮೌಲ್ಯದ 536 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆ.14ರಂದು ಮಹಿಳೆಯೊಬ್ಬರು ಬಟ್ಟೆ ಖರೀದಿಸಲು ಕೆ.ಆರ್‌.ಪುರದ ಬಟ್ಟೆ ಅಂಗಡಿಗೆ ಬಂದಿದ್ದಾಗ ದುಷ್ಕರ್ಮಿಗಳು ಪರ್ಸ್‌ನಿಂದ 6 ಸಾವಿರ ರು. ನಗದು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್ಸ್‌ಪೆಕ್ಟರ್‌ ರಾಮಮೂರ್ತಿ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ 24 ತಾಸಿನೊಳಗೆ ಆರೋಪಿಯನ್ನು ಕೆ.ಆರ್‌.ಪುರದ ಮಾರ್ಕೆಟ್‌ ಬಳಿ ಪತ್ತೆಹಚ್ಚಿ ಬಂಧಿಸಲಾಗಿದೆ.

ಪ್ರಕರಣದ ತನಿಖೆಗೆ ಇಳಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮಾಡುವಾಗ ಬಟ್ಟೆ ಅಂಗಡಿ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವು ಆಧರಿಸಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಕೆ.ಆರ್‌.ಪುರದ ಮಾರ್ಕೆಟ್‌ ಬಳಿ ಶಾರದಾಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳವು ಮಾಡಿದ್ದು ತಾನೇ ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ.

ವೃತ್ತಿಪರ ಕಳ್ಳಿ:

ಶಾರದಾ ವೃತ್ತಿಪರ ಕಳ್ಳಿಯಾಗಿದ್ದು, ಸಂತೆ, ಜಾತ್ರೆ, ಬಸ್‌ಗಳು ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದಳು. ಈ ಹಿಂದೆ ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಶಾರದಾ ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ತನ್ನ ಕಳ್ಳತನ ಚಾಳಿ ಮುಂದುವರೆಸಿದ್ದಳು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಜ್ಯುವೆಲರಿ, ಸಹಕಾರಿ ಬ್ಯಾಂಕ್‌ಗಳಲ್ಲಿ ಚಿನ್ನಾಭರಣ ಜಪ್ತಿ:

ಆಕೆಯ ಬಂಧನದಿಂದ ಕೆ.ಆರ್‌.ಪುರ ಠಾಣೆ 4, ಅನ್ನಪೂರ್ಣೇಶ್ವರಿನಗರ, ಬಾಗಲಗುಂಟೆ, ಮಹದೇವಪುರ ತಲಾ 1 ಸೇರಿದಂತೆ ಒಟ್ಟು 7 ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿ ಶಾರದಾ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಅರಸೀಕೆರೆ ಹಾಗೂ ಹಾಸನದ ವಿವಿಧ ಜುವೆಲರಿ ಅಂಗಡಿಗಳು ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಅಡಮಾನವಿರಿಸಿದ್ದ ಒಟ್ಟು 536 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.