ಸಾರಾಂಶ
ಕಿಕ್ಕೇರಿ : ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿ ಸಾವನ್ನಪ್ಪಿದ್ದು, ಆಕೆಯ ಪತಿ ಶವ ಕೆರೆಯಲ್ಲಿ ಪತ್ತೆಯಾಗಿದೆ. ಮಹಿಳೆ ಸಾವಿಗೆ ಗಂಡನ ಕುಟುಂಬಸ್ಥರೇ ಕಾರಣ ಎಂದು ಕುಟುಂಬಸ್ಥರು ಮನೆ, ಗೋದಾಮಿಗೆ ಬೆಂಕಿ ಹಚ್ಚಿದ ಘಟನೆ ಸಮೀಪದ ಗದ್ದೆಹೊಸೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೋಹನ್ (27) ಅವರ ಪತ್ನಿ ಬಿ.ಆರ್.ಧನಲಕ್ಷ್ಮಿ ಅಲಿಯಾಸ್ ಸ್ವಾತಿ (24) ಮೃತಪಟ್ಟವರು. ಬೇವಿನಹಳ್ಳಿ ರಾಜೇಗೌಡರ ಪುತ್ರಿ ಧನಲಕ್ಷ್ಮಿಯನ್ನು ಗದ್ದೆಹೊಸೂರು ಗ್ರಾಮದ ತೋಟದ ಮನೆಯ ಮಂಜೇಗೌಡರ ಪುತ್ರ ಮೋಹನ್‌ಗೆ ಕಳೆದೆರಡು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.
ಮಂಜೇಗೌಡ ಮೂಲತಃ ಹೋಬಳಿಯ ಐನೋರಹಳ್ಳಿಯವರು. ಗದ್ದೆಹೊಸೂರುವಿನಲ್ಲಿ ಜಮೀನು ಖರೀದಿಸಿ ತೋಟದ ಮನೆ ನಿರ್ಮಿಸಿಕೊಂಡು ವಾಸವಾಗಿದ್ದರು. ಧನಲಕ್ಷ್ಮಿ, ಮೋಹನ್ ದಂಪತಿಗೆ 11 ತಿಂಗಳ ಹೆಣ್ಣು ಮಗುವಿದೆ. ಅರಂಭದಲ್ಲಿ ಅನೋನ್ಯವಾಗಿದ್ದ ದಂಪತಿಗಳಲ್ಲಿ ನಂತರ ಕೌಟುಂಬಿಕ ಕಲಹ ಉಂಟಾಗಿದೆ.
ಧನಲಕ್ಷ್ಮಿ ಪತಿ ಮೋಹನ್ ಕ್ರಿಕೆಟ್ ಬೆಟ್ಟಿಂಗ್ ಗೀಳು ಬೆಳೆಸಿಕೊಂಡು ಸಾಕಷ್ಟು ಹಣ ಕಳೆದುಕೊಂಡಿದ್ದನು. ಹಣಕ್ಕಾಗಿ ಆಗಿಂದಾಗ್ಗೆ ತವರು ಮನೆಯಿಂದ ಹಣ ತರಲು ಪೀಡಿಸುತ್ತಿದ್ದನು ಎನ್ನಲಾಗಿದೆ. ಈ ಹಿಂದೆ ಕುಟುಂಬದಲ್ಲಿ ದೊಡ್ಡ ಗಲಾಟೆ ನಡೆದಾಗ ಧನಲಕ್ಷ್ಮಿ ಚಿಕ್ಕಪ್ಪ ರವಿ ಹಾಗೂ ಗದ್ದೆ ಹೊಸೂರು ಗ್ರಾಮದ ನಾಗೇಶ್ ಮೋಹನ್‌ಗೆ ತಿಳಿ ಹೇಳಿದ್ದರು.
11 ತಿಂಗಳ ಬಾಣಂತಿಯಾಗಿದ್ದ ಧನಲಕ್ಷ್ಮಿಯನ್ನು ತವರು ಮನೆ ಬೇವಿನಹಳ್ಳಿಯಿಂದ ವಿವಿಧ ಶಾಸ್ತ್ರಗಳನ್ನು ಮಾಡಿ ಗದ್ದೆ ಹೊಸೂರುವಿಗೆ ಕಳುಹಿಸಿ ಕೊಟ್ಟಿದ್ದರು. ಆದರೆ, ಮಂಗಳವಾರ ಸಂಜೆ ಧನಲಕ್ಷ್ಮಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿದ್ದಾಳೆ.
ಮನೆ, ತೋಟಕ್ಕೆ ಬೆಂಕಿ:
ಸಾವಿನ ವಿಷಯ ತಿಳಿದು ರಾಜೇಗೌಡರ ಕುಟುಂಬದವರು, ಗ್ರಾಮಸ್ಥರು ಗದ್ದೆಹೊಸೂರು ತೋಟದ ಮನೆಗೆ ತೆರಳಿದಾಗ ಸ್ಥಳದಲ್ಲಿ ಮೋಹನ್ ಕುಟುಂಬದವರು ಸಿಗದ ಕಾರಣ ಮನೆಯನ್ನು ಧ್ವಂಸ ಮಾಡಿದ್ದಾರೆ. ನಂತರ ಕೊಬ್ಬರಿ ಗೋದಾಮುವಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಕ್ಕೇರಿ ಪೊಲೀಸರು ವಿಷಯ ತಿಳಿದು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಹಬಂದಿಗೆ ತರಲು ಹರಸಾಹಸ ಪಟ್ಟಿದ್ದಾರೆ.
ಮೋಹನ್ ಪೋಷಕರ ವಿರುದ್ಧ ದೂರು:
ಮೃತ ಧನಲಕ್ಷ್ಮಿಗೆ ಮೋಹನ್ ಪೋಷಕರು ದೈಹಿಕವಾಗಿ ಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಆತ್ಮಹತ್ಯೆ ಎಂದು ಬಿಂಬಿಸಲು ಅಳಿಯ ಮೋಹನ್, ಇವರ ತಂದೆ ಮಂಜೇಗೌಡ, ತಾಯಿ ರತ್ನಮ್ಮ ಯತ್ನಿಸಿದ್ದಾರೆ. ತನ್ನ ಮಗಳ ಮದುವೆಗಾಗಿ 400 ಗ್ರಾಂ ಚಿನ್ನ ಜೊತೆಗೆ ಎರಡು ತಿಂಗಳ ಹಿಂದೆ 3 ಲಕ್ಷ ರು ನಗದು ನೀಡಲಾಗಿತ್ತು.
ಅಲ್ಲದೇ ಧನಲಕ್ಷ್ಮಿ ಅಲಿಯಾಸ್ ಸ್ವಾತಿ ಹೆಣ್ಣು ಮಗು ಹೆತ್ತಿದ್ದಾಳೆ ಎಂದು ಆಗಿಂದಾಗ್ಗೆ ಮೂದಲಿಸುತ್ತಿದ್ದರು. ತನ್ನ ಮಗಳ ಸಾವಿಗೆ ಮೋಹನ್ ಕುಟುಂಬದವರೇ ಕಾರಣ ಎಂದು ಕಿಕ್ಕೇರಿ ಪೊಲೀಸರಿಗೆ ಮೃತಳ ತಂದೆ ರಾಜೇಗೌಡ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿಗಳಾದ ಸಿ.ಇ. ತಿಮ್ಮಯ್ಯ, ಗಂಗಾಧರಯ್ಯ, ನಾಗಮಂಗಲ ಉಪವಿಭಾಗ ಡಿವೈಎಸ್ಪಿಎ.ಆರ್.ಸುಮೀತ್, ಕಿಕ್ಕೇರಿ ಠಾಣೆ ಇನ್ಸ್ ಪೆಕ್ಟರ್ ರೇವತಿ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಮಂಡ್ಯ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸ್‌ತುಕಡಿಯನ್ನು ಕರೆಸಿ ನಿಯೋಜಿಸಲಾಗಿದೆ.
ಮೋಹನ್ ಕೆರೆಯಲ್ಲಿ ಶವವಾಗಿ ಪತ್ತೆ:
ಪತ್ನಿ ಸ್ವಾತಿ ಸಾವಿನ ನಂತರ ಪತಿ ಮೋಹನ್ ಘಟನಾ ಸ್ಥಳದಿಂದ ಓಡಿ ಹೋಗಿದ್ದನು. ಆದರೆ, ಮನೆಗೆ ತುಸು ದೂರದಲ್ಲಿರುವ ಕೆರೆಯಲ್ಲಿ ಶವ ಬುಧವಾರ ಪತ್ತೆಯಾಗಿದೆ. ಮೃತಳ ತಂದೆ ದೂರಿನ ಮೇರೆಕೆ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಆರೋಪಿ ಮೋಹನ್ (ಮೃತನಾಗಿದ್ದು), ತಂದೆ ಮಂಜೇಗೌಡ, ತಾಯಿ ರತ್ನಮ್ಮ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.