ಸಾರಾಂಶ
ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಜಮೀನಿಗೆ ತೆರಳುವಾಗ ರೋಡ್ ರೋಲರ್ ಹರಿದು ಮಹಿಳೆ ಸಂಪೂರ್ಣ ಅಪ್ಪಚ್ಚಿ
ಪಾಂಡವಪುರ : ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಜಮೀನಿಗೆ ತೆರಳುವಾಗ ರೋಡ್ ರೋಲರ್ ಹರಿದು ಮಹಿಳೆ ಸಂಪೂರ್ಣ ಅಪ್ಪಚ್ಚಿಯಾಗಿ ಸ್ಥಳದಲ್ಲಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಸಣಬ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಗೌರಮ್ಮ ಬಿನ್ ಪಾಪಣ್ಣ (58) ಮೃತ ಮಹಿಳೆ. ಘಟನೆ ನಂತರ ಚಾಲಕ ಪರಾರಿಯಾಗಿದ್ದಾನೆ. ಈತ ಮಂಡ್ಯ ತಾಲೂಕಿನ ಪುರದಕೊಪ್ಪಲು ಶ್ರೀಧರ್ (21) ಎಂದು ಗೊತ್ತಾಗಿದೆ.
ನಾರಾಯಣಪುರದಿಂದ ಕಾಮನಾಯಕನಹಳ್ಳಿ, ಸಣಬ ಗ್ರಾಮದ ಮಾರ್ಗವಾಗಿ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆ ಶುಕ್ರವಾರ ಮಧ್ಯಾಹ್ನ ಸುಮಾರು 12.30ರ ಸಮಯದಲ್ಲಿ ಜಮೀನಿಗೆ ತೆರಳುತ್ತಿದ್ದ ಮಹಿಳೆ ಗೌರಮ್ಮ ಅವರ ಮೇಲೆ ಗುತ್ತಿಗೆದಾರ ರವಿಬೋಜೇಗೌಡ ಅವರಿಗೆ ಸೇರಿದ ರೋಡ್ ರೋಲರ್ ಹರಿದಿದೆ.
ಈ ವೇಳೆ ಗೌರಮ್ಮ ಅವರ ದೇಹ ಛಿದ್ರ ಛಿದ್ರವಾಗಿದೆ. ರೋಡ್ ರೋಲರ್ ಮೂಲಕ ರಸ್ತೆ ಕಾಮಗಾರಿ ಮಾಡುವ ವೇಳೆ ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸದೇ ನಿರ್ಲಕ್ಷ್ಯ ವಹಿಸಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಚನ್ನರಾಯಪಟ್ಟಣ ತಾಲೂಕಿನ ಸಾರಂಗಿ ಗ್ರಾಮಕ್ಕೆ ಮೃತ ಮಹಿಳೆ ಗೌರಮ್ಮ ಅವರನ್ನು ಮದುವೆ ಮಾಡಲಾಗಿತ್ತು. ಗಂಡ ಸತ್ತ ಬಳಿಕ ಹಲವು ವರ್ಷಗಳಿಂದ ಸೆಣಬ ಗ್ರಾಮದ ತಂಗಿ ಮನೆಯಲ್ಲೇ ಗೌರಮ್ಮ ವಾಸವಿದ್ದರು ಎನ್ನಲಾಗಿದೆ.
ಶಾಸಕ ಭೇಟಿ, ಸಾಂತ್ವನ:
ಘಟನಾ ಸ್ಥಳಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ ಮೃತರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಗುತ್ತಿಗೆದಾರ ರವಿ ಬೋಜೇಗೌಡ ಅವರಿಂದ 3 ಲಕ್ಷ ರು. ಪರಿಹಾರ ಕೊಡಿಸಿದರು.
ಘಟನೆ ಸಂಬಂಧ ಪಾಂಡವಪುರ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಧನಪಾಲ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
;Resize=(690,390))
)

;Resize=(128,128))
;Resize=(128,128))