ಸಾರಾಂಶ
ಬೆಂಗಳೂರು : ಕಾರು ಖರೀದಿಸಿ ಸಾಲದ ಕಂತು ಪಾವತಿಸಲಾಗದೆ ಮನನೊಂದು ಕ್ಯಾಬ್ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ ಮೂಲದ ದೇವರಾಜ್(21) ಆತ್ಮಹತ್ಯೆಗೆ ಶರಣಾದವರು. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ದೇವರಾಜ್ ಚಿಕ್ಕಬಾಣಾವಾರದ ಗಣಪತಿನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ದೇವರಾಜ್ ಒಂದು ವರ್ಷದ ಹಿಂದೆ ಬ್ಯಾಂಕ್‌ನಿಂದ ಸಾಲ ಪಡೆದು ಕಾರು ಖರೀದಿಸಿ ಬಾಡಿಗೆಗೆ ಕಾರು ಓಡಿಸಿಕೊಂಡು ಜೀವನ ಮಾಡುತ್ತಿದ್ದರು.
ದೇವರಾಜ್ ಇತ್ತೀಚೆಗೆ ಸರಿಯಾಗಿ ಬಾಡಿಗೆ ಸಿಗದೆ ಎರಡು ತಿಂಗಳಿಂದ ಕಾರಿನ ಸಾಲದ ಕಂತು ಪಾವತಿಸಿರಲಿಲ್ಲ. ಹೀಗಾಗಿ ಬ್ಯಾಂಕಿನವರು ಸಾಲದ ಬಾಕಿ ಕಂತು ಪಾವತಿಸುವಂತೆ ನೋಟಿಸ್ ಜಾರಿಗೊಳಿಸಿದ್ದರು ಎನ್ನಲಾಗಿದೆ. ಸಾಲದ ಕಂತು ತೀರಿಸಲಾಗದೆ ಮನನೊಂದು ದೇವರಾಜ್ ಏ.29ರಂದು ಬಾಡಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.