ಕಾರಿನಿಂದ ಇಳಿದಾಗ ಗುದ್ದೋಡಿದ ಮತ್ತೊಂದು ಕಾರು : ವಕೀಲ ಸಾವು

| N/A | Published : May 04 2025, 01:30 AM IST / Updated: May 04 2025, 05:44 AM IST

man found dead

ಸಾರಾಂಶ

ನಗರದ ಹೊರವಲಯದ ನೈಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಹಿಟ್ ಆ್ಯಂಡ್‌ ರನ್ ಅಪಘಾತದಲ್ಲಿ ವಕೀಲರೊಬ್ಬರು ಮೃತಪಟ್ಟಿದ್ದಾರೆ.

 ಬೆಂಗಳೂರು : ನಗರದ ಹೊರವಲಯದ ನೈಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಹಿಟ್ ಆ್ಯಂಡ್‌ ರನ್ ಅಪಘಾತದಲ್ಲಿ ವಕೀಲರೊಬ್ಬರು ಮೃತಪಟ್ಟಿದ್ದಾರೆ.

ಉಲ್ಲಾಳದ ವಿಶ್ವೇಶ್ವರಯ್ಯ ಲೇಔಟ್‌ನ ಎಚ್.ಜಗದೀಶ್ ಮೃತ ವಕೀಲ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಮ್ಮ ಕಕ್ಷಿದಾರರನ್ನು ಭೇಟಿಯಾಗಿ ಜಗದೀಶ್ ಅವರು ನೈಸ್ ರಸ್ತೆ ಮೂಲಕ ಮನೆಗೆ ಮರಳುವಾಗ ಈ ಅವಘಡ ಸಂಭವಿಸಿದೆ. ಮೊದಲು ಕೊಲೆ ಎಂದು ಅನುಮಾನ ವ್ಯಕ್ತವಾಗಿತ್ತು. ಆದರೆ ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಅಪಘಾತಕ್ಕೀಡಾಗಿ ವಕೀಲ ಜಗದೀಶ್ ಮೃತಪಟ್ಟಿರುವುದು ಖಚಿತವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಜಗದೀಶ್ ಕುಟುಂಬದ ಜತೆ ನೆಲೆಸಿದ್ದರು. ಹಲವು ವರ್ಷಗಳಿಂದ ಅವರು ವಕೀಲ ವೃತ್ತಿ ನಡೆಸುತ್ತಿದ್ದು, ಅಪರಾಧ ಪ್ರಕರಣದ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಕ್ಷಿದಾರರನ್ನು ಶುಕ್ರವಾರ ಭೇಟಿಯಾಗಿ ರಾತ್ರಿ ಮನೆಗೆ ಮರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಕೆಂಗೇರಿಯ ಸಿವಿ ರಾಮನ್ ಎಸ್ಟೇಟ್ ಪಕ್ಕದ ನೈಸ್ ರಸ್ತೆಯಲ್ಲಿ ಅವರ ಕಾರಿಗೆ ಹಿಂದಿನಿಂದ ಬೇರೊಂದು ವಾಹನ ಡಿಕ್ಕಿಯಾಗಿದೆ. ಇದರಿಂದ ತಮ್ಮ ಕಾರನ್ನು ನಿಲ್ಲಿಸಿ ಕೆಳಗಿಳಿದು ಅವರು, ತಮ್ಮ ಕಾರಿಗೆ ಗುದ್ದಿಸಿದವನಿಗೆ ಬೈಯಲು ಮುಂದಾಗಿರಬಹುದು. ಆ ವೇಳೆ ವಕೀಲರಿಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಜಗದೀಶ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಶಂಕೆ: ಕುಟುಂಬಸ್ಥರು

ವಕೀಲರ ಜಗದೀಶ್ ಅವರನ್ನು ಯಾರೋ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ.

ಜಗದೀಶ್ ಅವರ ಕಿಯಾ ಸೇಲ್ಟೋಸ್‌ ಕಾರಿನ ಎಡ ಮತ್ತು ಬಲಭಾಗದಲ್ಲಿ ಜಖಂಗೊಂಡಿದೆ. ಕಾರಿನ ಪಾರ್ಕಿಂಗ್‌ ಲೈಟ್ ಅನ್ ಆಗಿತ್ತು. ಅಲ್ಲದೆ ಕಾರಿನ ನಾಲ್ಕು ಬಾಗಿಲುಗಳು ಮುಚ್ಚಿದ್ದವು. ಹಾಗೆಯೇ ಕಾರು ನಿಂತಿದ್ದ ಜಾಗದಿಂದ ಸುಮಾರು 150 ಮೀಟರ್‌ ದೂರದಲ್ಲಿ ಮೃತದೇಹ ಬಿದ್ದಿತ್ತು. ವಕೀಲರ ತಲೆ, ಎಡಗಾಲು ಹಾಗೂ ಹೊಟ್ಟೆ ಭಾಗದಲ್ಲಿ ತರಚಿದ ಗಾಯಗಳಾಗಿದ್ದವು. ಇದನ್ನು ನೋಡಿದಾಗ ಜಗದೀಶ್ ಅವರನ್ನು ಕೊಲೆ ಮಾಡಿರಬಹುದು ಎಂದು ಮೃತ ಸಂಬಂಧಿ ಡಾ। ಎ.ಪ್ರಭಂಜನ್ ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.